ADVERTISEMENT

ರಾಜ್ಯೋತ್ಸವ: ಸರ್ಕಾರದಿಂದ ʼಕನ್ನಡಕ್ಕಾಗಿ‌ ನಾವುʼ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 8:30 IST
Last Updated 19 ಅಕ್ಟೋಬರ್ 2021, 8:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 24ರಿಂದ 30ರವರೆಗೆ ʼಕನ್ನಡಕ್ಕಾಗಿ ನಾವುʼ ರಾಜ್ಯೋತ್ಸವ ಅಭಿಯಾನ ಹಮ್ಮಿಕೊಂಡಿದೆ.ʼಮಾತಾಡ್ ಮಾತಾಡ್ ಕನ್ನಡʼ ಕಲ್ಪನೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಗೊಂಡಿದೆ.ಒಂದು ವಾರ ಆರು ರೀತಿಯ ಅಭಿಯಾನ ನಡೆಸಲಾಗುತ್ತಿದೆ ಎಂದುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು,ಕನ್ನಡವನ್ನು ಎಲ್ಲ ವ್ಯಕ್ತಿಗಳಿಗೆ, ಮನೆಗಳಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಭಾಷೆಯ ಮೂಲಕ ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿ ಮೂಲಕ ವ್ಯಕ್ತಿತ್ವ ನಿರ್ಮಾಣ ಆಗಲಿದೆ. ಜಾಗತಿಕರಣದ ಪ್ರಭಾವದ ನಡುವೆ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಅಭಿಯಾನದ ಹಿನ್ನೆಲೆಯಲ್ಲಿ ಲಾಂಛನ, ಕನ್ನಡದ ಹಿರಿಯ ಸಾಧಕರ ನುಡಿಗಳನ್ನು ಒಳಗೊಂಡ ಪ್ರೊಮೊ ಬಳಸಲಾಗುತ್ತದೆ. ಆ ಮೂಲಕ ಕನ್ನಡಪರ ವಾತಾವರಣವನ್ನು ನಾಡಿನಾದ್ಯಂತ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ನಾಡಿನ ಎಲ್ಲರೂ ಕನ್ನಡ ಬಳಸುವುದು, ಪ್ರತಿಯೊಬ್ಬರಲ್ಲೂ ಭಾಷೆಯ ಮಹತ್ವವನ್ನು ತಿಳಿಸಲಾಗುವುದು. ಅನ್ಯ ಭಾಷೆಯ ಪದಗಳನ್ನು ಬಳಸದೇ ಕನ್ನಡ ಮಾತನಾಡಲು ಪೂರಕ ವಾತಾವರಣ ನಿರ್ಮಿಸುವುದು ಸೇರಿದಂತೆ ಒಂದು ವಾರ ಕಾಲ ಸಂಪೂರ್ಣ ಕನ್ನಡಮಯ ವಾತಾವರಣ ಸೃಷ್ಟಿಸುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಆರು ಕಾರ್ಯಕ್ರಮ
1. ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ
ರಾಜ್ಯದ ಐದು ರಂಗಾಯಣಗಳು ಹಾಗೂ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಸಹಯೋಗದಲ್ಲಿ ರಾಜ್ಯದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ಕನ್ನಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ವಾರ್ಡ್‌ಗಳಲ್ಲಿ ಐಟಿಬಿಟಿ ಸಂಸ್ಥೆಗಳ ಆವರಣಗಳಲ್ಲಿ ಮೆಟ್ರೋ, ವಿಧಾನಸೌಧ, ವಿವಿಧ ಕಾರ್ಖಾನೆ ಆವರಣದಲ್ಲಿ ಇದೇ ತೆರನಾದ ಕಾರ್ಯಕ್ರಮ ಆಯೋಜಿಸಲಾಗಿದೆ.

2. ಸಾಮೂಹಿಕ ಕನ್ನಡ ಗೀತೆ ಗಾಯನ
ರಾಜ್ಯಾದ್ಯಂತ ಅಕ್ಟೋಬರ್ 28 ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳ ಗಾಯನ ನಡೆಯಲಿದೆ. ಇದಕ್ಕೆ ಈಗಾಗಲೇ ಮೂರು ಕನ್ನಡದ ಗೀತೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...

ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ ಕಾಲೇಜು, ವಿಶ್ವವಿದ್ಯಾಲಯ, ತಾಲೂಕು, ಗ್ರಾಮ ಮಟ್ಟದಲ್ಲಿ ಏಕಕಾಲಕ್ಕೆ ನಡೆಯಲಿದೆ. ವಿಧಾನಸೌಧ ಮೆಟ್ಟಿಲುಗಳ ಮೇಲೆ ಸಿಬ್ಬಂದಿಯಿಂದ, ಅಧಿಕಾರಿಗಳಿಂದ ಗಾಂಧಿ ಪ್ರತಿಮೆ ಬಳಿ ಗೀತಗಾಯನ ನಡೆಯಲಿದೆ.

3. ಕನ್ನಡದಲ್ಲಿ ಮಾತು ಮತ್ತು ಬರವಣಿಗೆ
ಕನ್ನಡ ಭಾಷೆ ಬೆಳೆಸುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಎಲ್ಲೆಡೆ ಕನ್ನಡ ಬಳಸುವಂತೆ ಮೊಬೈಲ್‌ನಲ್ಲಿ ಕನ್ನಡದಲ್ಲೇ ಸಂದೇಶ ಕಳಿಸುವುದು, ಜಾಲತಾಣದಲ್ಲಿಯೂ ಕನ್ನಡವನ್ನೇ ಬಳಸುವುದು‌.

4. ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ
ಅನ್ಯಭಾಷೆಯ ಒಂದೂ ಪದ ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷ ಕಾಲ‌ ನಾಡು-ನುಡಿಯ ಪರಂಪರೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ತೆಗೆದು ಕಳುಹಿಸುವುದು.

ಇದಕ್ಕಾಗಿಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿಸ್ಪರ್ಧೆ ನಡೆಯಲಿದ್ದು ಬಹುಮಾನ ನೀಡಲಾಗುತ್ತದೆ.

6. ಗಡಿ ಭಾಗದಲ್ಲಿ ಕನ್ನಡ ಜಾಗೃತಿ
ರಾಜ್ಯದ ಗಡಿ ಭಾಗದ ತಾಲೂಕು‌ ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತ ಜಾಗೃತಿ ಕಾರ್ಯಕ್ರಮದ ಮೂಲಕ‌ ಕನ್ನಡಕ್ಕಾಗಿ ನಾವು ಅಭಿಯಾನ‌ ನಡೆಸಲಾಗುತ್ತದೆ.

ಅ.29, 30, 31ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕೋತ್ಸವ, ದೇಶೀಯ ಉಡುಪು, ಆಹಾರ ಮೇಳ, ಶಿಲ್ಪಕಲೆ ಮೇಳ ಆಯೋಜಿಸಲಾಗುವುದು. ಜತೆಗೆ ಗೀತ ಗಾಯನ, ನೃತ್ಯ ರೂಪಕ, ಯಕ್ಷಗಾನ, ವಿಚಾರ ಸಂಕಿರಣ, ಗಾಯನ, ನಾಟಕ, ವಾದ್ಯ ಸಂಗೀತ, ಸುಗಮ‌ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿಗೆ 4,500 ಅರ್ಜಿ
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವ ಅರ್ಜಿಗಳನ್ನು ಸೋಸುವ ಪ್ರಕ್ರಿಯೆ ನಡೆದಿದೆ. ಸೋಮವಾರವೂ ಸಭೆ ನಡೆದಿದ್ದು, ಬುಧವಾರವೂ ನಡೆಯುತ್ತಿದೆ.

ಈ ವರೆಗೆ 4500 ಅರ್ಜಿ ಬಂದಿವೆ. ಅ.28-29 ರ ವೇಳೆಗೆ ಸಿಎಂ ನೇತೃತ್ವದಲ್ಲಿ ಅಂತಿಮಗೊಳ್ಳಲಿದೆ. ಎಷ್ಟು ಮಂದಿ ಶಿಫಾರಸು ಮಾಡಿದ್ದಾರೆ ಎಂಬುದು ಮಾನದಂಡ ಅಲ್ಲ, ಅವರ ಸಾಧನೆಯೇ ಮಾನದಂಡವಾಗಲಿದೆ ಎಂದುಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.