ADVERTISEMENT

ಇ.ಡಿ ಸಮನ್ಸ್‌ಗೆ ಹೆದರಲ್ಲ: ಡಿ.ಕೆ ಸುರೇಶ್

ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಸಂಸದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 4:40 IST
Last Updated 17 ಸೆಪ್ಟೆಂಬರ್ 2022, 4:40 IST
ಚನ್ನಪಟ್ಟಣದ ಪೇಟೆಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸಂಸದ ಡಿ.ಕೆ.ಸುರೇಶ್ ದಿನಸಿ ಕಿಟ್ ವಿತರಿಸಿದರು
ಚನ್ನಪಟ್ಟಣದ ಪೇಟೆಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸಂಸದ ಡಿ.ಕೆ.ಸುರೇಶ್ ದಿನಸಿ ಕಿಟ್ ವಿತರಿಸಿದರು   

ಚನ್ನಪಟ್ಟಣ: ‘ಬಿಜೆಪಿಯಜಾರಿ ನಿರ್ದೇಶನಾಲಯದ ಸಮನ್ಸ್‌ನಂತಹ ಬೆದರಿಕೆ ಪತ್ರಗಳಿಗೆ ಡಿ.ಕೆ ಸಹೋದರರು ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕು ಕಾಂಗ್ರೆಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಗರ ಹಾಗೂ ತಾಲ್ಲೂಕಿನಲ್ಲಿ ಮಳೆ ಸಂತ್ರಸ್ತಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಬಲವರ್ಧನೆ ಮತ್ತು ಕೆಪಿಸಿಸಿ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭವಿಷ್ಯ ನೆನೆದು ಬಿಜೆಪಿ ಭಯಭೀತವಾಗಿದೆ. ಇದೇ ಕಾರಣಕ್ಕೆ ಅನವಶ್ಯಕವಾಗಿ ಇಡಿ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಕುಗ್ಗಿಸುವ ಯತ್ನ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿನ ಯೋಜನೆಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದರೆ ಸಾಲದು, ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕು ಕಚೇರಿ, ನಾಡಕಚೇರಿ, ಪೊಲೀಸ್ ಠಾಣೆ ಹಾಗೂ ಪ್ರತಿಯೊಂದು ಕಚೇರಿಗಳಲ್ಲಿ ಹಣಕೊಟ್ಟರೆ ಮಾತ್ರ ಕೆಲಸ ಎಂಬುದು ತಿಳಿದ ವಿಚಾರ. ಬಿಜೆಪಿ ಸರ್ಕಾರ ಸುಲಿಗೆ ಸರ್ಕಾರ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸನ್ನ ಪಿ ಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳ ಜನ ನಿರಾಶ್ರಿತರಾಗಿದ್ದಾರೆ. ಅಂಥವರ ನೆರವಿಗಾಗಿ ದಿನಸಿ ಕಿಟ್ ವಿತರಿಸುತ್ತಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಮುಖಂಡರಾದ ಎಂ.ಶಿವಮಾದು, ಎ.ಸಿ.ವೀರೇಗೌಡ, ಚಂದ್ರಸಾಗರ್, ಬೋರ್ ವೆಲ್ ರಂಗನಾಥ್, ಪಿ.ಡಿ.ರಾಜು ಹಾಜರಿದ್ದರು.

ನಗರದ ಆರ್.ಎಂ.ಸಿ. ಯಾರ್ಡ್, ಪೇಟೆಚೇರಿ, ಬೀಡಿ ಕಾಲೋನಿ ಹಾಗೂ ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ಮಳೆಯಿಂದ ಸಂತ್ರಸ್ಥರಾದ ಮಂದಿಗೆ ದಿನಸಿ ಕಿಟ್ ವಿತರಣೆ
ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.