ADVERTISEMENT

ವ್ಯಕ್ತಿ ಪೂಜೆ ಮಾಡುವವರು ಬೇಡ: ಡಿಕೆ ಶಿವಕುಮಾರ್‌

‘ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರಿಗೆ ಮಾತ್ರ ಪ್ರವೇಶ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ವ್ಯಕ್ತಿ ಪೂಜೆ, ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡ. ಪಕ್ಷ ಪೂಜೆ ಮಾಡುವ, ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರಿಗೆ ಮಾತ್ರ ಪ್ರವೇಶವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಹಾಸನ ಜಿಲ್ಲೆಯ ಬೇಲೂರು ಪುರಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌ ಸದಸ್ಯರನ್ನು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಭಿನಂದಿಸಿ ಹಾಗೂ ಇತರ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಮಾತನಾಡಿದರು.

‘ಬೇರೆ ಪಕ್ಷದಿಂದ ಬಂದು ಗುಂಪುಗಾರಿಕೆ ಮಾಡಿ, ಕಾಂಗ್ರೆಸ್‌ಗೆ ಹಾನಿ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಿ. ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ. ಕಾಂಗ್ರೆಸ್‌ನ ತತ್ವ, ಸಿದ್ಧಾಂತ ಮತ್ತು ನಾಯಕತ್ವ ಒಪ್ಪಿಕೊಂಡು ಬರುವವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಪಕ್ಷ ಸೇರಲು ಬಯಸುವವರ ಪಟ್ಟಿಯನ್ನು ಸ್ಥಳೀಯ ಸಮಿತಿಗಳ ಮುಂದೆ ಇಟ್ಟು, ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಹಾಸನ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೆ ಅವರು ಸೂಚಿಸಿದರು.

ADVERTISEMENT

ಹಲವರು ಸಂಪರ್ಕದಲ್ಲಿ:
’ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಎಷ್ಟು ಮಂದಿ ಸಂಪರ್ಕಿಸಿದ್ದಾರೆ ಎಂಬುದನ್ನು ಈಗಲೇ ಹೇಳುವುದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅನೇಕರಿಗೆ ಖಚಿತವಾಗಿದೆ‘ ಎಂದು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲು ಬಿಜೆಪಿಯವರಿಗೆ ಒಳ್ಳೆಯ ಅವಕಾಶವಿತ್ತು. ಆದರೆ, ಅವರು ಜನರಿಗೆ ಸ್ಪಂದಿಸುವ ಬದಲಿಗೆ ಸ್ಮಶಾನದ ಬೂದಿ ನೀಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಹಳ್ಳಿಗಳಲ್ಲೂ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಗುರುತಿಸಿ, ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದರು.

ಪದಾಧಿಕಾರಿಗಳ ಬದಲಾವಣೆ: ಎಲ್ಲ ಹಂತದ ಪದಾಧಿಕಾರಿಗಳನ್ನು ಶೀಘ್ರದಲ್ಲಿ ನೇಮಿಸಲಾಗುವುದು. ಸಕ್ರಿಯವಾಗಿಲ್ಲದವರನ್ನು ಕೈಬಿಡಲಾಗುವುದು. ಪಂಚಾಯಿತಿ ಮಟ್ಟದಲ್ಲಿ ವಿದ್ಯಾರ್ಥಿಗಳು,
ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳ ಜನರು ಮತ್ತು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಿ ಸಮಿತಿಗಳನ್ನು ರಚಿಸಲಾಗುವುದು ಎಂದು ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.