ADVERTISEMENT

ಸ್ವಂತ ಶಕ್ತಿಯಿಂದ ಚುನಾವಣೆ ಎದುರಿಸುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 13:50 IST
Last Updated 26 ನವೆಂಬರ್ 2021, 13:50 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಚಿತ್ರದುರ್ಗ: ಬಿಜೆಪಿ ಸ್ವಂತ ಬಲದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಯಾರಾದರೂ ಬೆಂಬಲ ನೀಡಿದರೆ ಸ್ವೀಕರಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ಸಿಗುವ ಬೆಂಬಲವನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ – ಬಿಜೆಪಿ ಒಳ ಒಪ್ಪಂದವಾಗಿದೆ ಎಂದು ಕಾಂಗ್ರೆಸ್‌ ಟೀಕಿಸುತ್ತಿದೆ. ಕಾಂಗ್ರೆಸ್‌– ಬಿಜೆಪಿ ಒಪ್ಪಂದವಾಗಿದೆ ಎಂಬ ಆರೋಪವನ್ನು ಜೆಡಿಎಸ್‌ ಮಾಡುತ್ತಿದೆ. ಈ ಎರಡಕ್ಕೂ ಅರ್ಥವಿಲ್ಲ. ಚುನಾವಣೆಯಲ್ಲಿ ನಮ್ಮ ಹೋರಾಟವನ್ನು ನಾವು ಮಾಡುತ್ತೇವೆ’ ಎಂದರು.

‘ವಿಧಾನಪರಿಷತ್‌ ಚುನಾವಣೆಯ ಎಲ್ಲ ಕ್ಷೇತ್ರದಲ್ಲಿಯೂ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ. ಅಂತಹ ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಅದರ ಅರ್ಥ ಹೊಂದಾಣಿಕೆ ಮಾಡಿಕೊಳ್ಳುವುದಲ್ಲ. ರಾಜಕೀಯ ಅನುಭವದಿಂದ ಆಡಿದ ಮಾತುಗಳಿಗೆ ಅನರ್ಥ ಕಲ್ಪಿಸುವುದು ಸರಿಯಲ್ಲ’ ಎಂದರು.

ADVERTISEMENT

‘ಈ ಹಿಂದೆ ನೆರೆ ಬಂದಾಗ ಕಾಂಗ್ರೆಸ್‌ ಎಷ್ಟು ತ್ವರಿತವಾಗಿ ಸ್ಪಂದಿಸಿದೆ ಎಂಬುದು ಗೊತ್ತಿದೆ. ಬೆಳೆ ನಾಶವಾದರೆ ಪರಿಹಾರ ಸಿಗಲು ಮೂರು ತಿಂಗಳು ಹಿಡಿಯುತ್ತಿತ್ತು. ಮುಂಗಾರು ಹಂಗಾಮಿನ ಬೆಳೆ ನಾಶಕ್ಕೆ ಹಿಂಗಾರಿನಲ್ಲಿ ಪರಿಹಾರ ನೀಡಲಾಗಿದೆ. ಈಗ ಸಮೀಕ್ಷೆ ಪೂರ್ಣಗೊಂಡು ಕಚೇರಿಗೆ ಕಡತ ತಲುಪಿದ 24 ಗಂಟೆಯಲ್ಲಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರ ತಲುಪುತ್ತಿದೆ. ನವೆಂಬರ್‌ನಲ್ಲಿ ಬಿದ್ದ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ ₹ 97 ಲಕ್ಷ ಪರಿಹಾರವನ್ನು ಎರಡೇ ದಿನಗಳಲ್ಲಿ ನೀಡಲಾಗಿದೆ’ ಎಂದು ಹೇಳಿದರು.

ಕೇಂದ್ರದತ್ತ ಮುಖ ಮಾಡಿದ ರಾಜ್ಯ

ಕೃಷಿ ಕಾಯ್ದೆಯ ಬಗ್ಗೆ ಲೋಕಸಭೆಯ ಅಧಿವೇಶನದಲ್ಲಿ ನಡೆಯುವ ಚರ್ಚೆಯ ಆಧಾರದ ಮೇರೆಗೆ ರಾಜ್ಯದ ಕಾಯ್ದೆಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಎಪಿಎಂಸಿ ಕಾಯ್ದೆ ಹಾಗೂ ಇತರ ಕಾಯ್ದೆಗಳ ನಡುವೆ ವ್ಯತ್ಯಾಸವಿದೆ. ಕೇಂದ್ರದ ನಡೆಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ದಿಕ್ಸೂಚಿ ನಿರಾಕರಿಸಿದ ಸಿಎಂ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ಮುಂಬರುವ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗಬಲ್ಲದೇ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ.

‘ಸಾರ್ವತ್ರಿಕ ಚುನಾವಣೆ, ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗಳ ನಡುವೆ ವ್ಯತ್ಯಾಸವಿದೆ. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಗೆದ್ದಿತು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿತು. ಚುನಾವಣೆಯಿಂದ ಚುನಾವಣೆಗೆ ಭಿನ್ನತೆ ಇರುತ್ತದೆ’ ಎಂದರು.

***

ರಾಷ್ಟ್ರಮಟ್ಟದ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವ ರಾಷ್ಟ್ರೀಯ ಪಕ್ಷಗಳು ದೇಶದ ಹಿತಾಸಕ್ತಿ ಜೊತೆಗೆ ಸಾಗುತ್ತವೆ. ಪ್ರಾದೇಶಿಕ ಪಕ್ಷಗಳಿಗೆ ಪ್ರಾದೇಶಿಕ ಹಿತ ಮುಖ್ಯ. ದೇವೇಗೌಡರು ಹಿಂದೆ ರಾಷ್ಟ್ರೀಯ ಪಕ್ಷದಲ್ಲಿದ್ದರು.

ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.