ADVERTISEMENT

ಓಡಿ ಜೀವ ಉಳಿಸಿಕೊಂಡೆವು: ಕಾಲ್ತುಳಿತದ ಘಟನೆ ವಿವರಿಸಿದ ಗೋಕರ್ಣ ಪ್ರವಾಸಿಗರು

ರವಿ ಸೂರಿ
Published 29 ಜನವರಿ 2025, 23:39 IST
Last Updated 29 ಜನವರಿ 2025, 23:39 IST
ಪ್ರಯಾಗರಾಜ್‍ನ ತ್ರಿವೇಣಿ ಸಂಗಮದ ಬಳಿ ಸೇರಿದ್ದ ಜನಸ್ತೋಮ
ಪ್ರಜಾವಾಣಿ ಚಿತ್ರ: ರವಿಸೂರಿ
ಪ್ರಯಾಗರಾಜ್‍ನ ತ್ರಿವೇಣಿ ಸಂಗಮದ ಬಳಿ ಸೇರಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ: ರವಿಸೂರಿ   

ಪ್ರಯಾಗರಾಜ್: ‘ಶಾಹಿ ಸ್ನಾನ ಮಾಡುವ ತವಕದಲ್ಲಿ ಮಂಗಳವಾರ ತಡರಾತ್ರಿ ತ್ರಿವೇಣಿ ಸಂಗಮದ ಬಳಿ ಸಾಗುತ್ತಿದ್ದಂತೆ ಪೊಲೀಸರು ನಮ್ಮೆಲ್ಲರನ್ನು ಹಿಮ್ಮೆಟ್ಟಿಸಿದರು. ಜನರು ಗುಂಪುಗುಂಪಾಗಿ ಓಡತೊಡಗಿದರು. ನಾವೂ ಬಹುದೂರ ಓಡಿ ಬಂದ ಬಳಿಕ, 700 ಮೀಟರ್ ಅಂತರದಲ್ಲಿ ಕಾಲ್ತುಳಿತ ಸಂಭವಿಸಿದ್ದು ಗೊತ್ತಾಯಿತು’.

ಹೀಗೆ ದೊಡ್ಡ ಅಪಾಯದಿಂದ ಪಾರಾಗಿ ಬಂದ ಸಮಾಧಾನದೊಂದಿಗೆ ಕಾಲ್ತುಳಿತದ ಘಟನೆಯನ್ನು ಹತ್ತಿರದಿಂದ ಕಂಡ ಗೋಕರ್ಣದ ಗಣೇಶ ಮೂಳೆ ‘ಪ್ರಜಾವಾಣಿ’ ಪ್ರತಿನಿಧಿಗೆ ವಿವರಿಸಿದರು. ಅವರು ಸೇರಿ ಗೋಕರ್ಣದ 10ಕ್ಕೂ ಹೆಚ್ಚು ಮಂದಿ ಮಹಾಕುಂಭ ಮೇಳ ಕಣ್ತುಂಬಿಕೊಳ್ಳಲು ಗೋಕರ್ಣದಿಂದ ಪ್ರಯಾಗರಾಜ್‌ಗೆ ತೆರಳಿದ್ದಾರೆ.

‘ಸಂಗಮದ ಬಳಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದರು. ಸರಾಗವಾಗಿ ನಡೆಯಲು ಆಗದಷ್ಟು ಜನಸಂದಣಿ ಇತ್ತು. ಕಾಲ್ತುಳಿತದ ಘಟನೆ ನಡೆದ ಸ್ಥಳದಿಂದ ಹಲವು ಕಿಲೋ ಮೀಟರ್ ದೂರದವರೆಗೂ ಜನರು ಓಡುತ್ತಿದ್ದರು. ಕೆಲ ಮಹಿಳೆಯರು ಕೆಳಗೆ ಬಿದ್ದರು. ಅವರನ್ನು ಮೇಲೆತ್ತೆಲು ಪ್ರಯತ್ನಿಸಿದಾಗ, ಜನರು ಹಿಂದಿನಿಂದ ಒಮ್ಮೆಲೆ ಒಬ್ಬರ ಮೇಲೆ ಒಬ್ಬರು ಬಿದ್ದರು. ಕೆಳಗೆ ಬಿದ್ದ ಒಬ್ಬ ಮಹಿಳೆಯನ್ನು ಎಲ್ಲರೂ ಮೆಟ್ಟಿಕೊಂಡೇ ಹೋದರು. ಪೊಲೀಸರು ಬಂದು ರಕ್ಷಿಸುವಷ್ಟರಲ್ಲಿ ಆಕೆ ಅಸುನೀಗಿದ್ದಳು’ ಎಂದು ಪ್ರತ್ಯಕ್ಷದರ್ಶಿ, ಸೊಲ್ಲಾಪುರದ ಉದ್ಯಮಿ ರಾಜ್ ರಜಪೂತ ತಿಳಿಸಿದರು.

ADVERTISEMENT

‘ದುರ್ಘಟನೆ ನಡೆದ ನಂತರ ಸಂಗಮ ಸ್ನಾನಕ್ಕೆ ಅವಕಾಶ ನೀಡದೆ ಹಿಂದಕ್ಕೆ ಕಳುಹಿಸಲಾಯಿತು. ಗಂಗಾ ನದಿ ಸ್ನಾನಕ್ಕೆ ಮಾತ್ರ ಅವಕಾಶ ಕೊಟ್ಟರು. ನಾವು ತಂಗಿದ್ದ ಟೆಂಟ್‍ಗೆ ಮರಳಿ ಹಲವು ಗಂಟೆ ಬಳಿಕ ಮೊದಲು ಗಂಗಾ, ಆಮೇಲೆ ಸಂಗಮದಲ್ಲಿ ಸ್ನಾನ ಮಾಡಿದೆವು. ನಾವಿದ್ದ ಜಾಗದಿಂದ 5 ಕಿ.ಮಿ ದೂರ. ನಡೆದುಕೊಂಡೆ ಹೋಗಿ ಸ್ನಾನ ಮಾಡಿ ಬಂದಿದ್ದೇವೆ’ ಎಂದು ಗೋಕರ್ಣದ ಪ್ರವಾಸಿಗರು ತಿಳಿಸಿದರು.

‘ನಮಗೆ 20 ಕ್ಕೂ ಹೆಚ್ಚು ಜನ ಕನ್ನಡಿಗರು ಸಿಕ್ಕಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಧರಿಸಿದ್ದ ಟೀ ಶರ್ಟ್ ಹಿಂಬದಿ ಕನ್ನಡದಲ್ಲಿ ‘ಕುಂಭಮೇಳ’ ಎಂದು ಬರೆದಿದ್ದರಿಂದ ಕನ್ನಡದವರೇ ನಮ್ಮನ್ನು ಮಾತನಾಡಿಸಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.