ADVERTISEMENT

ಚುಮು ಚುಮು ಚಳಿಯ ಹಿತಾನುಭವ

ಕೊಡಗಿನಲ್ಲಿ ಮೈಕೊರೆಯುವ ಚಳಿ, ಪ್ರವಾಸಿಗರಿಗೆ ಆನಂದ

ಅದಿತ್ಯ ಕೆ.ಎ.
Published 15 ನವೆಂಬರ್ 2020, 14:21 IST
Last Updated 15 ನವೆಂಬರ್ 2020, 14:21 IST
ಬಾನಲ್ಲಿ ಚಿತ್ತಾರ... ಮಡಿಕೇರಿಯಲ್ಲಿ ಭಾನುವಾರ ಸಂಜೆ ಆಕಾಶದಲ್ಲಿ ಕಂಡುಬಂದ ದೃಶ್ಯ ಎಲ್ಲರನ್ನು ಸೆಳೆಯಿತು – ಪ್ರಜಾವಾಣಿ ಚಿತ್ರ: ರಂಗಸ್ವಾಮಿ
ಬಾನಲ್ಲಿ ಚಿತ್ತಾರ... ಮಡಿಕೇರಿಯಲ್ಲಿ ಭಾನುವಾರ ಸಂಜೆ ಆಕಾಶದಲ್ಲಿ ಕಂಡುಬಂದ ದೃಶ್ಯ ಎಲ್ಲರನ್ನು ಸೆಳೆಯಿತು – ಪ್ರಜಾವಾಣಿ ಚಿತ್ರ: ರಂಗಸ್ವಾಮಿ   

ಮಡಿಕೇರಿ: ಕೊಡಗು ಜಿಲ್ಲೆಯು ಈಗ ಚಳಿಗೆ ಮೈಯೊಡ್ಡಿದೆ. ಕಳೆದ ನಾಲ್ಕೈದು ದಿನಗಳಿಂದ ಜನರಿಗೆ ಚಳಿಯ ವಿಪರೀತ ಅನುಭವ ಉಂಟಾಗುತ್ತಿದೆ. ಜೊತೆಗೆ ಗಾಳಿ, ಆಗಾಗ್ಗೆ ತುಂತುರು ಮಳೆ ಮೈನಡುಗುವಂತೆ ಮಾಡುತ್ತಿದೆ. ಬೆಳಿಗ್ಗೆ, ಸಂಜೆ ವೇಳೆಯಲ್ಲಿ ಚಳಿ ದರ್ಬಾರ್‌ ನಡೆಸುತ್ತಿದೆ.

ಕೊರೊನಾ ಭಯ ಬಿಟ್ಟು ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದು ಅವರಿಗೂ ಮಾಗಿ ಚಳಿ ಹಿತಕರ ಅನುಭವ ತರುತ್ತಿದೆ.

ಪ್ರಕೃತಿ ಮಡಿಲಿನ ಕೊಡಗಿನಲ್ಲಿ ಕಾಫಿ ತೋಟ, ಬೆಟ್ಟಗುಡ್ಡ, ರಸ್ತೆಯಂಚು... ಹೀಗೆ ನಾನಾ ಕಡೆ ಪ್ರಕೃತಿ ನವೋಲ್ಲಾಸದ ನಗೆ ಬೀರುತ್ತಿದೆ. ಮರಗಿಡಗಳಲ್ಲಿ ಬೆಳ್ಳಂಬೆಳಿಗ್ಗೆ ತೊಟ್ಟಿಕ್ಕುವ ಮಂಜಿನ ಹನಿಗೆ ಹಸಿರು ಇನ್ನಷ್ಟು ಮುದವಾಗಿ ಕಾಣಿಸುತ್ತಿದೆ.

ADVERTISEMENT

ಜಿಲ್ಲೆಯ ಜನರ ದಿನಚರಿಯಲ್ಲೂ ಬದಲಾವಣೆಯಾಗಿದೆ. ಕಪಾಟು ಸೇರಿದ್ದ ಸ್ವೆಟರ್‌, ಟೋಪಿಗಳು ಹೊರ ಬಂದಿವೆ. ಲಾಕ್‌ಡೌನ್‌, ಕೊರೊನಾ ಭಯದಿಂದ ಕಳೆದ ಐದಾರು ತಿಂಗಳಿಂದ ಬಹುತೇಕರು ವಾಕಿಂಗ್‌ಗೆ ವಿರಾಮ ಹಾಕಿದ್ದರು. ಈಗ ಮತ್ತೊಮ್ಮೆ ವಾಕಿಂಗ್‌ ಆರಂಭಿಸಿದ್ದು ಅವರು ಉಡುಪುಗಳಲ್ಲಿ ಬದಲಾವಣೆ ಕಂಡಿದೆ. ರೇಸ್‌ ಕೋರ್ಸ್‌ ರಸ್ತೆ, ರಾಜಾಸೀಟ್‌, ಹೊಸ ಬಡಾವಣೆ, ಕಾವೇರಿ ಲೇಔಟ್‌... ಹೀಗೆ ವಾಕ್‌ ಮಾಡುವವರು ಬೆಚ್ಚಗಿನ ಟೋಪಿ ಹಾಕಿಕೊಂಡು, ಮೊಬೈಲ್‌ನಲ್ಲಿ ಸಂಗೀತ ಕೇಳುತ್ತಲೇ ಚಳಿಗೆ ಸ್ವಾಗತ ಎನ್ನುತ್ತಿದ್ದಾರೆ.

ಬೆಂಕಿಯ ಮೊರೆ:ಜಿಲ್ಲೆಯ ಸೋಮವಾರಪೇಟೆ, ನಾಪೋಕ್ಲು ಭಾಗದಲ್ಲಿ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದೆ. ಲಾಕ್‌ಡೌನ್‌ನಿಂದ ಊರು ಸೇರಿದ್ದ ಬೇರೆ ಬೇರೆ ಜಿಲ್ಲೆಗಳ ಕಾರ್ಮಿಕರು ಮತ್ತೆ ಕೊಡಗಿನ ಕಾಫಿ ತೋಟ ಸೇರಿದ್ದಾರೆ. ಅವರೆಲ್ಲರೂ ಚಳಿಯಿಂದ ಪಾರಾಗಲು ಲೈನ್‌ಮನೆ, ಟೆಂಟ್‌ಗಳಲ್ಲಿ ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಆದರೂ ಮೈನಡುಗುವ ಚಳಿ ಮಾತ್ರ ಮಾಯವಾಗುತ್ತಿಲ್ಲ! ಅದರಲ್ಲೂ ಗ್ರಾಮೀಣ ಪ್ರದೇಶ ನದಿಯಂಚಿನ ಗ್ರಾಮ, ಬೆಟ್ಟದ ಮೇಲಿನ ಊರುಗಳಲ್ಲಿ ವಿಪರೀತ ಚಳಿ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಜನರು.

ನಿಧಾನಕ್ಕೆ ಚಳಿ ಲಗ್ಗೆಯಿಡುತ್ತಿದ್ದಂತೆಯೇ ಚಳಿಗಾಲದ ಪ್ರವಾಸೋದ್ಯಮವು ಗರಿಗೆದರುತ್ತಿದೆ. ಪ್ರವಾಸಿಗರು ಚಳಿ ಆನಂದಿಸುತ್ತಿದ್ದಾರೆ. ಗಿರಕಂದರಗಳ ಮೇಲೆ ಬೀಸುತ್ತಿರುವ ಮಾಗಿಯ ಗಾಳಿ ಮೈನಡುಗುವಂತೆ ಮಾಡುತ್ತಿದೆ. ಮಾಂದಲ್‌ಪಟ್ಟಿ, ತಡಿಯಂಡಮೋಳ್‌, ತಲಕಾವೇರಿ, ಮೇರನಕೋಟೆ ಬೆಟ್ಟ, ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಚಳಿ ತೀವ್ರತೆ ಹೆಚ್ಚಾಗಿದೆ. ಅಲ್ಲಿಗೆ ಹೋದ ಪ್ರವಾಸಿಗರು ಸಂಭ್ರಮ ಪಡುತ್ತಿದ್ದಾರೆ.

ಎಚ್ಚರಿಕೆ ಮರೆತರು!

ಚಳಿಗಾಲದ ವೇಳೆ ಕೊರೊನಾದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ, ಅದಕ್ಕೆ ಪ್ರವಾಸಿಗರು ಕ್ಯಾರೆ ಎನ್ನುತ್ತಿಲ್ಲ. ಮಾಸ್ಕ್‌ ಧರಿಸದೇ ಅಡ್ಡಾಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಯಾರೂ ಈ ಬಗ್ಗೆ ಪ್ರಶ್ನಿಸುತ್ತಿಲ್ಲ. ಇನ್ನು ಏಕಾಂತ ಸ್ಥಳದಲ್ಲಿರುವ ಹೋಂಸ್ಟೇಗಳಿಗೆ ಬೇಡಿಕೆ ಬಂದಿದೆ. ಅಂತಹ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡು ಪ್ರವಾಸಿಗರು ಅತ್ತ ತೆರಳುತ್ತಿದ್ದಾರೆ.

ಚಳಿಗಾಲದಲ್ಲಿ ರಾಜಾಸೀಟ್‌ ವೀಕ್ಷಣಾ ಸ್ಥಳದಲ್ಲಿ ನಿಂತು ಸೂರ್ಯಾಸ್ತದ ಸೊಬಗು ನೋಡುವುದು ಆನಂದ. ಬಾನಲ್ಲಿ ಮೋಡಗಳು ಚಿತ್ತಾರ ಬಿಡಿಸಿದಂತೆ ಕಾಣಿಸುತ್ತದೆ. ಜೊತೆಗೆ, ಬೆಟ್ಟಗಳ ಹಸಿರು ಮನಸ್ಸಿಗೆ ಮುದ ನೀಡಲಿವೆ. ದೀಪಾವಳಿ ರಜೆ ಹಿನ್ನೆಲೆಯಲ್ಲಿ ಭಾನುವಾರ ರಾಜಾಸೀಟ್‌ನಲ್ಲಿ ನೂರಾರು ಪ್ರವಾಸಿಗರು ಕಂಡುಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.