ನಮ್ಮನ್ನು ಅಗಲಿದ ನಾ.ಡಿಸೋಜ ಅವರು ಸ್ಥಳೀಯವಾದ ವಿದ್ಯಮಾನಗಳ ಮೂಲಕ ಇಡೀ ನಾಡಿಗೆ ಮತ್ತು ರಾಷ್ಟ್ರಕ್ಕೆ ಪ್ರಸ್ತುತವಾಗಬಲ್ಲಂತಹ ಅನೇಕ ಪ್ರಶ್ನೆಗಳನ್ನು ನಮ್ಮೆದುರು ಇಟ್ಟಿದ್ದಾರೆ.
ಅಂದಿನ ಮೈಸೂರು ಮತ್ತು ಇಂದಿನ ಕರ್ನಾಟಕದ ಅತ್ಯಂತ ಪ್ರಗತಿಪರವಾದ ಸಾಧನೆ ಮಾಡಿದೆ ಎಂದು ಹೇಳುತ್ತಿದ್ದರೋ ಅಂತಹದ್ದನ್ನು ಅವರು ಪ್ರಶ್ನಿಸಿದ್ದರು. ಒಂದು ಜಲವಿದ್ಯುತ್ ಉತ್ಪಾದನೆಯ ಯೋಜನೆಯ ಕಾರಣಕ್ಕೆ ಸ್ಥಳಾಂತರಗೊಳ್ಳಬೇಕಾದ ಸಾವಿರಾರು ಜನರು ಇರುವಂತಹ ಅನೇಕ ಸಮುದಾಯಗಳ ಪರಿಸ್ಥಿತಿಯ ಬಗ್ಗೆ ಅವರು ತಮ್ಮ ‘ಮುಳುಗಡೆ’ ಎಂಬ ಕೃತಿಯಲ್ಲಿ ಪ್ರಸ್ತಾಪ ಮಾಡಿದರು. ‘ದ್ವೀಪ’ ಸಿನಿಮಾದ ವಸ್ತುವೂ ಇದೇ ಆಗಿತ್ತು. ಗಿರೀಶ ಕಾಸರವಳ್ಳಿ ಅವರು ಅದನ್ನು ಬಹಳ ಅರ್ಥಪೂರ್ಣವಾಗಿ ಸಿನಿಮಾ ಮೂಲಕ ಪರಿಸರವಾದಿಗಳ ಪ್ರಜ್ಞೆಗೆ ತರುವಂತಹ ಕೆಲಸ ಮಾಡಿದರು.
ಅವರು ಒಬ್ಬ ಜನಪ್ರಿಯ ಬರಹಗಾರರು ಎಂದು ನಾನು ಅಂದುಕೊಂಡಿಲ್ಲ. ಏಕೆಂದರೆ ಬಹಳ ವಿಶಾಲವಾದ ಓದುವ ವರ್ಗ ಇದ್ದರು ಕೂಡ, ಅವರು ಆಯ್ದುಕೊಂಡ ವಸ್ತು ಬಹಳ ಗಂಭೀರವಾದುದಾಗಿತ್ತು. ಇದಕ್ಕೆ ಒಂದು ಪ್ರಸಂಗ ನೆನಪಾಗುತ್ತಿದೆ. ತಮ್ಮ ಬದುಕನ್ನು ಉಳಿಸಿಕೊಳ್ಳಬೇಕು ಎಂದು ದೋಣಿಯಲ್ಲಿ ಹೋಗುತ್ತಿರುವವರು, ಆ ದೋಣಿಯಲ್ಲಿದ್ದ ದೇವರ ಮೂರ್ತಿಗಳ ಭಾರದಿಂದ ಅಪಾಯ ಬರಬಹುದೆಂದು ಅವುಗಳನ್ನು ಪ್ರವಾಹದ ನೀರಿಗೆ ಹಾಕಿಡುವಂತಹ ತೀರ್ಮಾನ ಮಾಡಿಬಿಡುತ್ತಾರೆ. ಈ ಎಲ್ಲ ಸೂಕ್ಷ್ಮಗಳನ್ನು ನಾವು ನೋಡುತ್ತಾ ಹೋದರೆ, ಅವರ ಕೃತಿಗಳನ್ನು ನಾವು ಗಂಭೀರವಾಗಿ ಓದುವ ಅವಶ್ಯಕತೆ ಇದೆ ಎಂದು ನಾನು ಅಂದುಕೊಂಡಿದ್ದೇನೆ.
ಒಬ್ಬ ಕೃತಿಕಾರನ ಮಹತ್ವ ಅರ್ಥಮಾಡಿಕೊಳ್ಳುವಲ್ಲಿ, ಆತ ಸಮಾಜವನ್ನು ಯಾವ ಯಾವ ಕೋನಗಳಿಂದ ತಲುಪುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಇದನ್ನು ಅವರ ಬರಹಗಳಲ್ಲಿ ಕಾಣಲು ಸಾಧ್ಯವಿದೆ. ಅಂತಹ ಬರಹಗಾರನಿಗೆ ಸಮುದಾಯದೊಂದಿಗೆ ನಿರಂತರವಾದ ಸಂಭಾಷಣೆ, ವಾಗ್ವಾದ ನಡೆಯುತ್ತಲೇ ಇರಬೇಕಾಗುತ್ತದೆ. ಅದನ್ನು ಅವರು ಸಾಧಿಸಿದ್ದರು.
ಇಷ್ಟೇ ಮುಖ್ಯವಾದ ಮತ್ತೊಂದು ವಿಚಾರವೂ ಇದೆ. 44 ವರ್ಷಗಳಿಂದ ನಾನು ಶಿವಮೊಗ್ಗದಲ್ಲಿ ಇದ್ದೇನೆ. ಇಲ್ಲಿನ ಎಲ್ಲ ಜನಪರ ಚಳವಳಿಗಳ ಜತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧ ಇಟ್ಟುಕೊಂಡಿದ್ದೇನೆ. ಆ ಚಳವಳಿಗಳಲ್ಲಿ ಡಿಸೋಜ ಅವರ ಅಗಾಧ ಬದ್ಧತೆಯನ್ನು ನೋಡಿದ್ದೇನೆ. ಕೋಮುವಾದಿಗಳು ಕೆಲವು ಧರ್ಮಗಳ ವಿರುದ್ಧ ಶಿವಮೊಗ್ಗದಲ್ಲಿ ಕ್ಷೋಭೆ ಉಂಟುಮಾಡುವಂತಹ ಪ್ರಯತ್ನ ನಡೆಯುತ್ತಿದ್ದಾಗ, ಪ್ರತಿಭಟನೆ ಆಯೋಜಿಸಿದ್ದೆವು. ಆ ಪ್ರತಿಭಟನಾ ಸ್ಥಳಕ್ಕೆ, ಅದು ಆರಂಭವಾಗಬೇಕಿದ್ದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋದವರು ನಾನು ಮತ್ತು ಡಿಸೋಜ ಮಾತ್ರ.
ಸಾಗರದಲ್ಲಿ ಒಂದು ಸಮುದಾಯ ಪ್ರಜ್ಞೆ ಬಹಳ ಗಟ್ಟಿಯಾಗಿದೆ ಮತ್ತು ಅದಕ್ಕೊಂದು ದೊಡ್ಡ ಇತಿಹಾಸವೇ ಇದೆ. ಒಂದು ಘಟನೆ ನೆನಪಾಗುತ್ತಿದೆ. ಸಾಗರದಲ್ಲಿ ಇದ್ದಂತಹ ಜಾತ್ಯತೀತ ಮನೋಭಾವನೆ ಮುರಿಯುವ ಒಂದು ಘಟನೆ ನಡೆಯಿತು. ಇದು ತಪ್ಪು, ತಪ್ಪು ಗ್ರಹಿಕೆಯಿಂದ ಉಂಟಾಗಿರುವಂಥದ್ದು ಎಂದು ಮನವರಿಕೆ ಮಾಡಲು ಒಂದು ದೊಡ್ಡ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಗೆ ಡಿಸೋಜ ಅವರೇ ಮೂಲ ಪ್ರೇರಣೆ. ಆ ಸಭೆಯಲ್ಲಿ ಅವರು ಆಡಿದ ಮಾತುಗಳು ಈಗಲೂ ನನಗೆ ನೆನಪಿದೆ. ವಿಷಾದದಿಂದ ನಾನದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದೇನೆ. ಕೋಮುವಾದ, ಪ್ರತ್ಯೇಕತೆ ಯಾವುದೂ ಇಲ್ಲದಂತಹ ಸುಂದರವಾದ ಸ್ಥಿತಿ ಇರುವಲ್ಲಿ, ಅದನ್ನು ಹಾಳುಮಾಡುವಂತಹ ಯಾವುದೇ ಶಕ್ತಿಗಳು ಕ್ರಿಯಾಶೀಲವಾದ ತಕ್ಷಣವೇ ಅವನ್ನು ಪ್ರಶ್ನಿಸಬೇಕು ಎಂಬ ಪ್ರಜ್ಞೆ ನಾ.ಡಿಸೋಜ ಅವರಲ್ಲಿ ಇತ್ತು. ಎಲ್ಲ ಕಾಲಕ್ಕೂ ಇಂತಹ ನಗರ, ಪ್ರದೇಶಗಳಲ್ಲಿ ನಾ.ಡಿಸೋಜ ಅಂತಹವರು ಬಂದು ನಾಗರಿಕ ಪ್ರಜ್ಞೆಯನ್ನು, ವಿವೇಕವನ್ನು, ಸಹಬಾಳ್ವೆಯನ್ನು ಹೇಳಿಕೊಡಬೇಕು. ಅಂತಹ ನಾ.ಡಿಸೋಜ ಅವರು ನಮ್ಮನ್ನು ಅಗಲಿದ್ದು ಬಹಳ ದುಃಖದ ಸಂಗತಿ.
⇒ ನಿರೂಪಣೆ: ಜಯಸಿಂಹ ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.