ADVERTISEMENT

ಪಶ್ಚಿಮ ಘಟ್ಟ | 153.8 ಚದರ ಕಿ.ಮೀ.ಅರಣ್ಯ ನಾಶ: ಶಿವಮೊಗ್ಗದಲ್ಲೇ ಅತಿಹೆಚ್ಚು

ಜಯಸಿಂಹ ಆರ್.
Published 25 ಡಿಸೆಂಬರ್ 2024, 0:25 IST
Last Updated 25 ಡಿಸೆಂಬರ್ 2024, 0:25 IST
ಪಶ್ಚಿಮ ಘಟ್ಟ
ಪಶ್ಚಿಮ ಘಟ್ಟ   

ಬೆಂಗಳೂರು: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ರಾಜ್ಯದ ಹತ್ತು ಜಿಲ್ಲೆಗಳ ಪೈಕಿ ಆರರಲ್ಲಿ ಅರಣ್ಯ ನಾಶ ತೀವ್ರವಾಗಿದೆ. 2013ರಿಂದ 2023ರ ನಡುವೆ ಆರು ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಇಲ್ಲವಾಗಿದೆ.

ಕೇಂದ್ರ ಸರ್ಕಾರವು ಈಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ–2023’ರಲ್ಲಿ ಈ ಮಾಹಿತಿ ಇದೆ. ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸಾಲಿನಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 74.54 ಚದರ ಕಿ.ಮೀ., ಕೊಡಗಿನಲ್ಲಿ 33.40 ಚದರ ಕಿ.ಮೀ., ಬೆಳಗಾವಿಯಲ್ಲಿ 24.91 ಚದರ ಕಿ.ಮೀ. ಮತ್ತು ಮೈಸೂರಿನಲ್ಲಿ 15.28 ಚದರ ಕಿ.ಮೀ.ನಷ್ಟು ಅರಣ್ಯ ನಾಶವಾಗಿದೆ. ಹಾಸನ ಮತ್ತು ಚಾಮರಾಜನಗರದಲ್ಲಿ ಅರಣ್ಯದ ವಿಸ್ತೀರ್ಣ ಸ್ವಲ್ಪ ಕುಸಿದಿದೆ.

ಇಷ್ಟೂ ಜಿಲ್ಲೆಗಳಲ್ಲಿ ‘ಅತಿದಟ್ಟಾರಣ್ಯ’ದ ವ್ಯಾಪ್ತಿ ಹತ್ತು ವರ್ಷಗಳಲ್ಲಿ ಹೆಚ್ಚಾಗಿದೆ. ಆದರೆ ‘ದಟ್ಟಾರಣ್ಯ’ದ ವ್ಯಾಪ್ತಿ ಸ್ವಲ್ಪ ಕುಸಿದಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ‘ಸಾಧಾರಣ ಅರಣ್ಯ’ವು ಜನವಸತಿ ಮತ್ತು ವಾಣಿಜ್ಯ ಬೆಳೆ ಚಟುವಟಿಕೆ ಪ್ರದೇಶಗಳಿಗೆ ಹೊಂದಿಕೊಂಡಿದ್ದು, ಇಲ್ಲೇ ಅತಿಹೆಚ್ಚು ಅರಣ್ಯ ನಾಶವಾಗಿದೆ.

ADVERTISEMENT

ಮರಗಳ ಹಸಿರಿನ ಹೊದಿಕೆ ಶೇ 10ರಿಂದ ಶೇ40ರಷ್ಟು ಇರುವ ಕಾಡನ್ನು ‘ಸಾಧಾರಣ ಅರಣ್ಯ’ ಎಂದು ವರ್ಗೀಕರಿಸಲಾಗಿದ್ದು, ಪಶ್ಚಿಮ ಘಟ್ಟದ ಶೋಲಾ ಕಾಡುಗಳೂ ಇದರ ವ್ಯಾಪ್ತಿಗೆ ಬರುತ್ತವೆ. ವಾಣಿಜ್ಯ ಬೆಳೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಈ ಅರಣ್ಯ ಪ್ರದೇಶಗಳಿಗೆ ಆಕ್ರಮಣಕಾರಿ ಸಸ್ಯಪ್ರಬೇಧಗಳು ದಾಟಿಕೊಂಡಿವೆ. ಇದರಿಂದ ಸ್ಥಳೀಯ ಅರಣ್ಯ ಸಸಿ, ಮರ, ಹುಲ್ಲು ಪ್ರಬೇಧಗಳಿಗೆ ಮತ್ತು ವನ್ಯಜೀವಿಗಳಿಗೆ ಕಂಟಕ ಎದುರಾಗಿದೆ ಎಂಬ ವಿವರ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.