ADVERTISEMENT

ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿ; ಹಲವು ಗ್ರಾಮ ಕೈಬಿಡಲು ನಿರ್ಧಾರ

ಚಂದ್ರಹಾಸ ಹಿರೇಮಳಲಿ
Published 26 ನವೆಂಬರ್ 2023, 20:39 IST
Last Updated 26 ನವೆಂಬರ್ 2023, 20:39 IST
ಪಶ್ಚಿಮಘಟ್ಟ
ಪಶ್ಚಿಮಘಟ್ಟ    

ಬೆಂಗಳೂರು: ಜನವಸತಿ ಹಾಗೂ ಪಶ್ವಿಮಘಟ್ಟ ಎರಡಕ್ಕೂ ಧಕ್ಕೆಯಾಗದಂತೆ ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯನ್ನು ಪುನರ್‌ನಿಗದಿ ಮಾಡಿ ಕೇಂದ್ರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ದೇಶದ ಜೀವವೈವಿಧ್ಯ ತಾಣ ಪಶ್ಚಿಮಘಟ್ಟ ಪರಿಸರ ಸೂಕ್ಷ್ಮವಲಯ ಸಂರಕ್ಷಣೆ ಕುರಿತು ಕಸ್ತೂರಿರಂಗನ್‌ ನೇತೃತ್ವದ ಸಮಿತಿ ನೀಡಿದ್ದ ವರದಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ ಬರುವ ಮಾರ್ಚ್‌ಗೆ (2024) ಒಂದು ದಶಕವಾಗುತ್ತಿದೆ. ಕೇಂದ್ರ ಪರಿಸರ ಸಚಿವಾ ಲಯ ಅಂತಿಮ ಅಧಿಸೂಚನೆ ಹೊರಡಿ ಸುವ ಮೊದಲು ಕರ್ನಾಟಕ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳು ಸಮ್ಮತಿ ನೀಡಬೇಕಿದೆ. ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವ ಅನಿವಾರ್ಯತೆಗೆ ಸಿಲುಕಿದೆ.

ಮಾಧವ ಗಾಡ್ಗೀಳ್ ವರದಿಯನ್ನು 2011ರಲ್ಲಿ ತಿರಸ್ಕರಿಸಿದ ಕೇಂದ್ರ ಸರ್ಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ 10 ಸದಸ್ಯರನ್ನು ಒಳಗೊಂಡ ಮತ್ತೊಂದು ಸಮಿತಿ ರಚಿಸಿತ್ತು. ಸಮಿತಿ 15 ಏಪ್ರಿಲ್‌ 2013ರಂದು ವರದಿ ಸಲ್ಲಿಸಿತ್ತು. ವರದಿ ಅಂಗೀಕರಿಸಿದ ಸರ್ಕಾರ 14 ಮಾರ್ಚ್ 2014ರಂದು ಮೊದಲ ಕರಡು ಅಧಿಸೂಚನೆ ಹೊರಡಿಸಿತ್ತು. ಇದುವರೆಗೂ ಐದು ಬಾರಿ ಅಧಿಸೂಚನೆ ವಿಸ್ತರಿಸಲಾಗಿದೆ.

ADVERTISEMENT
ಜೀವ ಸಂಕುಲ, ಜನರ ಬದುಕನ್ನು ಗಮನದಲ್ಲಿ ಇಟ್ಟುಕೊಂಡು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
–ಈಶ್ವರ ಖಂಡ್ರೆ, ಅರಣ್ಯ ಸಚಿವ

ಕಸ್ತೂರಿರಂಗನ್‌ ವರದಿ ಜಾರಿಯ ವಿಷಯದಲ್ಲಿ ರಾಜ್ಯ ಸರ್ಕಾರ ಇದು ವರೆಗೂ ಜವಾಬ್ದಾರಿಯುತ ತೀರ್ಮಾನ ತೆಗೆದುಕೊಳ್ಳದೇ ಸಾರಾಸಗಟಾಗಿ ತಿರಸ್ಕ ರಿಸುತ್ತಾ ಬಂದಿದೆ. ವರದಿಯಿಂದ ತನ್ನ ಭೂಭಾಗ ಕೈಬಿಡುವ ರಾಜ್ಯ ಸರ್ಕಾರದ ವಿನಂತಿಗೆ ಕೇಂದ್ರ ಸರ್ಕಾರ ಸಮ್ಮತಿಯನ್ನೂ ನೀಡಿಲ್ಲ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ವ್ಯಾಪ್ತಿಯ 59,940 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕಸ್ತೂರಿರಂ‌ಗನ್ ಸಮಿತಿ ಗುರುತಿಸಿದೆ. ಕರ್ನಾಟಕದ ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಕೊಡಗು, ಮೈಸೂರು, ಚಾಮರಾಜ ನಗರ ಜಿಲ್ಲೆಗಳ 20,668 ಚ.ಕಿ.ಮೀ ಪಶ್ಚಿಮಘಟ್ಟದ ಪ್ರದೇಶ, ಅಲ್ಲಿನ 1,576 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತವೆ.

ಕಸ್ತೂರಿರಂಗನ್‌ ವರದಿಯಲ್ಲಿ ಶೇ 50ಕ್ಕಿಂತ ಹೆಚ್ಚು ನೈಸರ್ಗಿಕ ಭೂ ಪ್ರದೇಶ ಗಣನೆಗೆ ತೆಗೆದುಕೊಂಡ 858 ಗ್ರಾಮಗಳ ವಿಸ್ತೀರ್ಣ 13.09 ಲಕ್ಷ ಹೆಕ್ಟೇರ್‌ನಷ್ಟಿದೆ. ಕರಡು ಅಧಿಸೂಚನೆಯ ನಂತರ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ 594 ಗ್ರಾಮಗಳ 5,94,835 ಹೆಕ್ಟೇರ್‌ಗೂ ಹೆಚ್ಚು ಪ್ರದೇಶವನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈಗ ಮತ್ತೆ 1,416 ಚ.ದ.ಕೀ ವ್ಯಾಪ್ತಿ ಹಾಗೂ 99 ಹಳ್ಳಿಗಳನ್ನು ಕೈಬಿಡಲಾಗಿದೆ. ವರದಿ ಜಾರಿಯಿಂದ ತೊಂದರೆಗೆ ಒಳಗಾಗಬಹುದು ಗ್ರಾಮಗಳನ್ನು ಪಟ್ಟಿಯಿಂದ ಹೊರಗಿಡಲು, ಜನವಸತಿ ರಹಿತ ಪ್ರದೇಶಗಳನ್ನಷ್ಟೇ ಸೂಕ್ಷ್ಮವಲಯ ವ್ಯಾಪ್ತಿಗೆ ಸೇರಿಸುವ ಕಾರ್ಯ ಮುಂದುವರಿದಿದೆ.  

‘ಪಶ್ಚಿಮಘಟ್ಟ ಹಲವು ನದಿಮೂಲಗಳನ್ನು ಒಳಗೊಂಡ ಜೀವ ವೈವಿಧ್ಯದ ಅಮೂಲ್ಯ ತಾಣ. ಪಾರಂಪರಿಕವಾದ ಅಲ್ಲಿನ ಜನಜೀವನವೂ ಅಷ್ಟೇ ಮುಖ್ಯ. ವರದಿಯಲ್ಲಿನ ವ್ಯಾಪ್ತಿ ಪರಿಶೀಲಿಸಿ, ಜನಜೀವನಕ್ಕೆ ಧಕ್ಕೆಯಾಗದಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಸಲ್ಲಿಸುವುದು ರಾಜ್ಯದ ಕರ್ತವ್ಯ. ಈಗಾಗಲೇ ನೆರೆಯ ಕೇರಳ ಅಂತಹ ಕೆಲಸ ಮಾಡಿದೆ. ಒಂದು ವೇಳೆ  ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದರೆ, ವರದಿಯಲ್ಲಿನ ಎಲ್ಲ ಪ್ರದೇಶಗಳೂ ಪರಿಸರ ಸೂಕ್ಷ್ಮ ವ್ಯಾಪ್ಯಿಗೆ ಸೇರುತ್ತವೆ. ಆಗ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾಗಿ, ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎನ್ನುತ್ತಾರೆ ಅರಣ್ಯ ಸಚಿವ ಈಶ್ವರ ಖಂಡ್ರೆ.

ತಜ್ಞರ ಸಮಿತಿ ಕಳುಹಿಸಿದ ಕೇಂದ್ರ

ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಜತೆ ಚರ್ಚಿಸಲು ಕೇಂದ್ರ ಸರ್ಕಾರ ಸಂಜಯ್‌ಕುಮಾರ್‌ ನೇತೃತ್ವದ ತಜ್ಞರ ಸಮಿತಿಯನ್ನು ಕಳುಹಿಸಿದೆ. ಈಗಾಗಲೇ ಸರ್ಕಾರದ ಪ್ರತಿನಿಧಿಗಳ ಜತೆ ಸಮಿತಿ ಒಂದು ಸುತ್ತಿನ ಚರ್ಚೆ ನಡೆಸಿದೆ. ವರದಿ ಜಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಜನರ ಜತೆ ಎರಡನೇ ಹಂತದಲ್ಲಿ ಮಾತುಕತೆ ನಡೆಸಿ, ಅವರ ಅಹವಾಲು ಆಲಿಸಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.