ADVERTISEMENT

ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ?: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 16:35 IST
Last Updated 23 ಆಗಸ್ಟ್ 2021, 16:35 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ   

ಹಿರೇಕೆರೂರು: ‘ನಾನು ₹25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಕ್ಕೆ, ನನಗೇನು ಫಲ ಕೊಟ್ಟಿದ್ದೀರಿ? ಜನತೆ ಜೊತೆ ಚೆಲ್ಲಾಟ ಆಡುವ ಸರ್ಕಾರ ‌ತರಬೇಡಿ, ಒಮ್ಮೆ ನನಗೆ ಸಂಪೂರ್ಣ ಬಹುಮತ ನೀಡಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ಸರ್ವಜ್ಞ ವೃತ್ತದ ಸಮೀಪ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಜಯಾನಂದ ಜಾವಣ್ಣನವರ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ಯೋಜನೆಗಳ ಹೆಸರಿನಲ್ಲಿ ಗುತ್ತಿಗೆದಾರರ ಬಳಿ ಕಮಿಷನ್ ತೆಗೆದುಕೊಳ್ಳುತ್ತಾರೆ, ಅದನ್ನೇ ತಂದು ನಿಮಗೆ ಹಂಚುತ್ತಾರೆ. ನಾನು ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡೋಕೆ ಶೇ 10 ಕಮಿಷನ್ ತಗೊಂಡಿದ್ರೆ ಮತಕ್ಕೆ 2 ಸಾವಿರ, 3 ಸಾವಿರ ಹಂಚಬಹುದಿತ್ತಲ್ಲಾ? ಎಸಿ, ಡಿಸಿ ಪೋಸ್ಟಿಂಗ್‌ಗೆ ಎಷ್ಟೆಷ್ಟು ಲಕ್ಷ ಕೊಟ್ಟು ಬರಬೇಕು ಅಧಿಕಾರಿಗಳು? ಈ ಬಗ್ಗೆ ಯೋಚನೆ ಮಾಡಿ ಎಂದರು.

ADVERTISEMENT

ಇದು ನನ್ನ ಕೊನೆಯ ಚುನಾವಣೆ: ಕರ್ನಾಟಕದ ಆಡಳಿತ ಕನ್ನಡಿಗರಿಂದಲೇ ಎಂಬ ಹೊಸ ಅದ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ. ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ. ಇದು ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ ಎಂದರು.

ಕೇಂದ್ರ ನಂಬಿದರೆ ಗೌರವವಿಲ್ಲ: ಕೇಂದ್ರ ಸರ್ಕಾರ ನಂಬಿದರೆ ನಿಮಗೆ ಗೌರವ ಇಲ್ಲ, ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ಜನತೆ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುತ್ತೇವೆ. ಉಚಿತ ಶಿಕ್ಷಣ, ಆರೋಗ್ಯ, ಕೃಷಿ ವಲಯಕ್ಕೆ ಆದ್ಯತೆ, ಯುವಕರಿಗೆ ಉದ್ಯೋಗ ಒದಗಿಸುವುದು ನನ್ನ ಯೋಜನೆಗಳಾಗಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.