ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಮಕ್ಕಳಿಗೆ ಲಸಿಕೆ ನೀಡುವುದು ಯಾವಾಗ?

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 19:59 IST
Last Updated 15 ಡಿಸೆಂಬರ್ 2020, 19:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್‌–19 ತಡೆಗೆ ಲಸಿಕೆ ಹಾಕುವ ಕಾರ್ಯಕ್ಕೆ ಭರದ ಸಿದ್ಧತೆ ನಡೆದಿದೆ. ಮೊದಲು ಯಾರಿಗೆ ಲಸಿಕೆ ಹಾಕಬೇಕು ಎಂಬ ಆದ್ಯತಾ ಪಟ್ಟಿಯನ್ನು ಭಾರತವೂ ಈಗಾಗಲೇ ಪ್ರಕಟಿಸಿದ್ದು ಪೂರ್ವ ಸಿದ್ಧತೆಗಳಲ್ಲಿ ತೊಡಗಿರುವುದು ಗೊತ್ತೇ ಇದೆ. ಆದರೆ ಮಕ್ಕಳಿಗೆ ಮತ್ತು ಶಿಶುಗಳಿಗೆ ಈ ಲಸಿಕೆ ಹಾಕುವ ಬಗ್ಗೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪೋಷಕರು ವಿವರಗಳಿಗಾಗಿ ಕಾಯುತ್ತಿದ್ದಾರೆ.

ಅಮೆರಿಕದ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಪ್ರಕಾರ, ಹದಿಹರೆಯದವರ ಮೇಲೆ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ನಡೆಯದ ಹೊರತು ಶಿಶುಗಳು ಮತ್ತು ಮಕ್ಕಳಿಗೆ ಲಸಿಕೆ ಹಾಕುವುದು ಸಾಧ್ಯವಿಲ್ಲ.

ಇದುವರೆಗೆ ವಯಸ್ಕರ ಮೇಲೆ (ಗರ್ಭಿಣಿಯರನ್ನು ಹೊರತುಪಡಿಸಿ) ಮಾತ್ರ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ನಡೆಸಲಾಗಿದೆ. 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವೇ ಎಂಬುದಕ್ಕೆ ಯಾವುದೇ ದೃಢೀಕರಣ ಇಲ್ಲದಿರುವುದರಿಂದ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸಿಡಿಸಿ ಹೇಳಿದೆ.

ADVERTISEMENT

ಮೊದಲು ದೊಡ್ಡ ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪ್ರಯೋಗ ನಡೆಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ರೋಗ ನಿರೋಧ ವ್ಯವಸ್ಥೆ ವಯಸ್ಕರಿಗಿಂತ ವಿಭಿನ್ನವಾಗಿರುತ್ತದೆ. ಇದಲ್ಲದೇ ಎಷ್ಟು ಡೋಸ್‌ ಲಸಿಕೆ ನೀಡಬೇಕು ಮತ್ತು ಎಷ್ಟು ಸಲ ನೀಡಬೇಕು ಎಂಬುದು ಕೂಡ ಮಕ್ಕಳಿಗೆ ಬೇರೆಯ ರೀತಿಯಲ್ಲಿರುತ್ತದೆ.

ಈ ಮೊದಲು 12 ವರ್ಷ ವಯಸ್ಸಿನ ಮಕ್ಕಳನ್ನು ಲಸಿಕೆಯ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲು ಫೈಝರ್‌ ಕಂಪನಿಗೆ ಅನುಮತಿ ನೀಡಲಾಗಿತ್ತು. ಆದರೆ ನಂತರ 16 ಮತ್ತು 17 ವರ್ಷ ವಯಸ್ಸಿನ ಹದಿಹರೆಯದವರ ಮೇಲೆ ಮಾತ್ರ ಈ ಪ್ರಯೋಗ ನಡೆಸಲು ಒಪ್ಪಿಗೆ ನೀಡಿದ್ದು, ಇನ್ನೂ ಈ ಫಲಿತಾಂಶದ ವಿಶ್ಲೇಷಣೆ ನಡೆದಿಲ್ಲ ಎಂದು ಕಂಪನಿ ತಿಳಿಸಿದೆ.

ಮತ್ತೊಂದು ಅಂಶವೆಂದರೆ ಮಧ್ಯ ವಯಸ್ಕರಿಗೆ ಮತ್ತು ವೃದ್ಧರಿಗೆ ಕೋವಿಡ್‌–19 ಬಾಧಿಸುವ ಸಾಧ್ಯತೆ ಅಧಿಕ ಎಂಬುದು ಅಂಕಿ– ಅಂಶಗಳಿಂದ ದೃಢಪಟ್ಟಿರುವುದರಿಂದ ಅಂಥವರಿಗೆ ಲಸಿಕೆ ಹಾಕಲು ಆದ್ಯತೆ ನೀಡಲಾಗಿದೆ. ಹೀಗಾಗಿ ಮಕ್ಕಳ ಮೇಲಿನ ಕ್ಲಿನಿಕಲ್‌ ಪ್ರಯೋಗ ವಿಳಂಬವಾಗುತ್ತಿದೆ ಎಂದು ಸಿಡಿಸಿ ತಿಳಿಸಿದೆ. ಆದರೆ ಮಕ್ಕಳಿಗೆ ಕೋವಿಡ್‌–19 ಹರಡುವುದನ್ನು ತಡೆಯಲು ಆದಷ್ಟು ಶೀಘ್ರ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗ ನಡೆಸಲು ಲಸಿಕೆ ತಯಾರಿಕಾ ಕಂಪನಿಗಳು ಸಿದ್ಧತೆ ನಡೆಸುತ್ತಿವೆ.

ಮಕ್ಕಳನ್ನು ಸುರಕ್ಷಿತವಾಗಿ ಇಡುವುದರ ಜೊತೆಗೆ ನೈತಿಕತೆಯ ಪ್ರಶ್ನೆ ಇರುವುದರಿಂದ ಮಕ್ಕಳ ಮೇಲೆ ಪ್ರಯೋಗ ನಡೆಸುವುದು ಅಷ್ಟು ಸುಲಭವಲ್ಲ. ಮಕ್ಕಳಿಗೆ ಪೋಲಿಯೊ, ರ‍್ಯುಬೆಲ್ಲಾ, ಚಿಕನ್‌ಪಾಕ್ಸ್‌, ಡಿಫ್ತೀರಿಯ, ಧನುರ್ವಾತ ಮೊದಲಾದ ಕಾಯಿಲೆಗಳಿಗೆ ಈಗ ಇರುವ ಲಸಿಕೆಗಳನ್ನು ದಶಕಗಳ ಕಾಲ ಪ್ರಯತ್ನದ ನಂತರ ಕಂಡುಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.