ADVERTISEMENT

‘ವನ್ಯಜೀವಿಗಳ ಸಂಖ್ಯೆ ಕಡಿಮೆ ಎಲ್ಲಿ ಆಗುತ್ತೇರಿ?’ ಸದನದಲ್ಲಿ ಉಮೇಶ್‌ ಕತ್ತಿ ಉತ್ತರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 21:44 IST
Last Updated 13 ಸೆಪ್ಟೆಂಬರ್ 2021, 21:44 IST
ಉಮೇಶ ಕತ್ತಿ
ಉಮೇಶ ಕತ್ತಿ   

ಬೆಂಗಳೂರು: ‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಕಡಿಮೆ ಎಲ್ಲಿ ಆಗುತ್ತದೆ... ಹೆಚ್ಚಾ ಗುತ್ತಾ ಹೋಗುತ್ತದೆ’ –ಇದು, ಅರಣ್ಯ ಸಚಿವ ಉಮೇಶ ಕತ್ತಿ ಅವರ ಉತ್ತರ.

‘ವನ್ಯಜೀವಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ. ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಯಾವ ಯೋಜನೆಗಳನ್ನು ರೂಪಿಸಿದೆ’ ಎಂದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಎಚ್‌.ಎಂ. ರಮೇಶ್‌ಗೌಡ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ‘ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ರಕ್ಷಣಾ ಕ್ರಮಗಳಿಂದಾಗಿ ಮುಖ್ಯವಾಗಿ ಆನೆ, ಹುಲಿ, ಚಿರತೆ ಮುಂತಾದ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದರು.

‘2017ರ ಆನೆ ಗಣತಿಯಂತೆ ರಾಜ್ಯದಲ್ಲಿ 6,049 ಆನೆಗಳಿವೆ. ದೇಶದಲ್ಲಿರುವ ಆನೆಗಳ ಒಟ್ಟು ಸಂಖ್ಯೆಯ ಶೇ 25ರಷ್ಟು ಕರ್ನಾಟಕದಲ್ಲಿದ್ದು, ರಾಷ್ಟ್ರದಲ್ಲಿಯೇ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ‘ನಾಲ್ಕು ವರ್ಷಗಳಿಗೆ ಒಮ್ಮೆ ವನ್ಯಜೀವಿಗಳ ಗಣತಿ ನಡೆಯುತ್ತದೆ. ವನ್ಯಜೀವಿಗಳ ಹಾವಳಿಯಿಂದ ನಷ್ಟ ಅನುಭವಿಸಿದವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ’ ಎಂದೂ ಕತ್ತಿ ತಿಳಿಸಿದರು.

ADVERTISEMENT

33 ಹುಲಿ ಸಾವು: 2018ರ ಸಾಲಿನ ಹುಲಿ ಗಣತಿಯಂತೆ ರಾಜ್ಯದಲ್ಲಿ 524 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮೂರು ವರ್ಷದಲ್ಲಿ 33 ಹುಲಿಗಳು ಮೃತಪಟ್ಟಿವೆ. 2018–19ರಲ್ಲಿ 11, 2019–20ರಲ್ಲಿ 10 ಹಾಗೂ 2020–21ರಲ್ಲಿ 12 ಹುಲಿಗಳು ಸಾವಿಗೀಡಾಗಿವೆ ಎಂದು ಕತ್ತಿ ತಿಳಿಸಿದರು.

ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಾವು ಹೆಚ್ಚು ಎಂದೂ ಅವರು ಹೇಳಿದರು.

ಶುಲ್ಕದ ಹಣ ಹುಲಿ ಸಂರಕ್ಷಿತ ಪ್ರತಿಷ್ಠಾನ ನಿಧಿಗೆ

ಕೊಡಚಾದ್ರಿ ಪ್ರವೇಶ ಶುಲ್ಕ ಮೂರು ಪಟ್ಟು, ಚಾರಣ ಶುಲ್ಕ ಶೇ 50ರಷ್ಟು ಹೆಚ್ಚಳ ಮಾಡಿರುವುದಕ್ಕೆ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ, ಈ ಹಣವನ್ನು ಭದ್ರಾ ಹುಲಿ ಸಂರಕ್ಷಿತ ಪ್ರತಿಷ್ಠಾನ ನಿಧಿ ಮತ್ತು ಕಟ್ಟಿನಹೊಳೆ ಪರಿಸರ ಅಭಿವೃದ್ಧಿ ಸಮಿತಿಗೆ ಜಮೆ ಮಾಡುವುದಾಗಿ ಹೇಳಿದೆ.

ಕೊಡಚಾದ್ರಿ ಚಾರಣ ಶುಲ್ಕ ಪರಿಷ್ಕರಣೆ ಕುರಿತು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅರಣ್ಯ ಸಚಿವ ಉಮೇಶ ಕತ್ತಿ, ‘2021ರ ಏ.1ರಿಂದ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಪ್ರವೇಶ ಶುಲ್ಕವನ್ನು ₹25ರಿಂದ ₹100ಕ್ಕೆ, ಚಾರಣ ಶುಲ್ಕವನ್ನು ₹200ರಿಂದ ₹300ಕ್ಕೆ ಏರಿಸಲಾಗಿದೆ’ ಎಂದರು.

‘ಕೊಡಚಾದ್ರಿಯಲ್ಲಿ 2021–22ರ ಆಗಸ್ಟ್‌ವರೆಗೆ ₹22.46 ಲಕ್ಷವನ್ನು ವಿವಿಧ ಶುಲ್ಕಗಳ ರೂಪದಲ್ಲಿ ಸಂಗ್ರಹಿಸಲಾಗಿದೆ. ಈ ಪೈಕಿ ಕಟ್ಟಿನಹೊಳೆ ಪರಿಸರ ಅಭಿವೃದ್ಧಿ ಸಮಿತಿಗೆ ₹2.82 ಲಕ್ಷ ಹಾಗೂ ಭದ್ರಾ ಹುಲಿ ಪ್ರತಿಷ್ಠಾನ ನಿಧಿಗೆ ₹19.64 ಲಕ್ಷ ಜಮಾ ಮಾಡಲಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.