ADVERTISEMENT

ಕಲ್ಲಂಗಡಿಗೆ ಬೊಂಬಡಿ ಹಾಕುವವರು, ರೈತ ಬೆಳೆ ರಸ್ತೆಗೆ ಚೆಲ್ಲಿದಾಗ ಎಲ್ಲಿದ್ರು?

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 10:52 IST
Last Updated 12 ಏಪ್ರಿಲ್ 2022, 10:52 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಧಾರವಾಡ: 'ಕೇವಲ ಹಣ್ಣು ಹಾಳು ಮಾಡಿದ್ದಕ್ಕೆ ಇಷ್ಟೊಂದು ಬೊಂಬಡಿ ಹೊಡೆಯಬೇಕಾ? ರೈತರು ತಮ್ಮ ಬೆಳೆ ರಸ್ತೆಗೆ ಚೆಲ್ಲಿದಾಗ ಇವರೆಲ್ಲ ಎಲ್ಲಿದ್ದರು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನಿಸಿದ್ದಾರೆ.

ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮುಸ್ಲೀಮರಿಗೆ ಸೇರಿದ ಅಂಗಡಿ ದ್ವಂಸಗೊಳಿಸಿದ ಪ್ರಕರಣದಡಿ ಬಂಧನದಲ್ಲಿರುವ ಸಂಘಟನೆ ಕಾರ್ಯಕರ್ತರನ್ನು ಮಂಗಳವಾರಜೈಲಿನಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಗ ಇವರಿಗೆ ರೈತರ ಬಗ್ಗೆ ಕಾಳಜಿ ಇರಲಿಲ್ಲವೇ? ಹಿಂದೂಗಳನ್ನು ಅವಹೇಳನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದರು ಆರೋಪಿಸಿದರು.

ADVERTISEMENT

‘ಸಿದ್ದರಾಮಯ್ಯ, ಗುಂಡೂರಾವ್‌ ಹಾಗೂ ಗುಂಡಾ ನಲ್ಪಾಡ್ ಈಗ ಮಾತನಾಡುತ್ತಿದ್ದಾರೆ. ಹರ್ಷ ಹಾಗೂ ಚಂದ್ರು ಕೊಲೆ ಆದಾಗ ಇವರು ಅಲ್ಲಿಗೆ ಹೋಗಲಿಲ್ಲ. ಇವರಂತೆಯೇ ಬುದ್ದಿ ಜೀವಿಗಳು ಮುಸ್ಲಿಂ ಹಾಗೂ ಕ್ರೈಸ್ತರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರಿಂದ ದುಡ್ಡು ಪಡೆದು ಹೇಸಿಗೆ ತಿನ್ನುವ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ನುಗ್ಗಿಕೇರಿ ದೇವಸ್ಥಾನಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆಗಲೇ ಅವರು ನಿರ್ಣಯ ತೆಗೆದುಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ. ನಬೀಸಾಬ್ ಹನುಮಂತ ಭಕ್ತ ಎಂದು ಹೇಳಿಕೊಂಡಿದ್ದಾನೆ. ಹಾಗಿದ್ದರೆ ಆತ ಕುಂಕುಮ ಹಚ್ಚಿಕೊಂಡು ಬರಲಿ. ಹನುಮಪ್ಪನ ಪೂಜೆ ಮಾಡಿದರೆ ಅವನ ಧರ್ಮದವರೇ ಅವನನ್ನು ಕೊಂದು ಹಾಕುತ್ತಾರೆ’ ಎಂದರು.

‘ಪ್ರಕರಣ ನಡೆದ ಸಂದರ್ಭದಲ್ಲಿ ನಬೀಸಾಬ್ ಸ್ಥಳದಲ್ಲೇ ಇರಲಿಲ್ಲ ಎಂದು ಜೈಲಿನಲ್ಲಿರುವ ಹುಡುಗರು ತಿಳಿಸಿದ್ದಾರೆ. ಅವರು ಹೊರಗೆ ಬಂದ ನಂತರ ಹೆಚ್ಚಿನ ವಿಷಯ ತಿಳಿಬೇಕಿದೆ. ಜೈಲಿನಲ್ಲಿ ಇವರಿಗೆ ಬೆದರಿಕೆ ಹಾಕಿರುವ ಸಂಗತಿ ನಡೆದಿದೆ. ಮುಸ್ಲೀಮರು ಹೀಗೆ ಹೆದರಿಸಿದರೆ ಅದರ ಹತ್ತು ಪಟ್ಟು ಹೆದರಿಸುವ ಧೈರ್ಯ ನಮಗೂ ಇದೆ’ ಎಂದು ಎಚ್ಚರಿಕೆ ನೀಡಿದರು.

ಲವ್ ಕೇಸರಿ ಅಭಿಯಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ನಮ್ಮ ರಾಜ್ಯದ ಅಭಿಯಾನವಲ್ಲ. ಆದರೆ ಶಬ್ದ ಚೆನ್ನಾಗಿದೆ. ಕಳೆದ 15 ವರ್ಷಗಳಿಂದ ಲವ್ ಜಿಹಾದ್ ಕುರಿತು ಹೋರಾಟ ನಡೆಯುತ್ತಿದೆ. ಕೇರಳದಲ್ಲಿ ನಾಲ್ಕು ಸಾವಿರ ಯುವತಿಯರು ಇದಕ್ಕೆ ಬಲಿಯಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.