ADVERTISEMENT

ಅಕ್ಕಿ ಬದಲು ಅಕ್ಕರೆಯಿಂದ ಪುಸ್ತಕ ಹಂಚಿದರು!

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 14:09 IST
Last Updated 13 ಜೂನ್ 2020, 14:09 IST
ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್‌.ಜಯದೇವ (ಎಡದಿಂದ ಮೂರನೆಯವರು) ಅವರು ಘಟಕದ ಸದಸ್ಯರ ಜೊತೆ ಮಹಿಳೆಯೊಬ್ಬರಿಗೆ ಪುಸ್ತಕ ವಿತರಿಸಿದರು
ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್‌.ಜಯದೇವ (ಎಡದಿಂದ ಮೂರನೆಯವರು) ಅವರು ಘಟಕದ ಸದಸ್ಯರ ಜೊತೆ ಮಹಿಳೆಯೊಬ್ಬರಿಗೆ ಪುಸ್ತಕ ವಿತರಿಸಿದರು   

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ವೇಳೆ ವಿವಿಧ ಸಂಘ ಸಂಸ್ಥೆಗಳು ಜನರಿಗೆ ಅಕ್ಕಿ, ಧವಸಧಾನ್ಯಗಳನ್ನು ಹಂಚಿದ್ದನ್ನು ಕೇಳಿದ್ದೇವೆ. ಆದರೆ, ಈ ಸಂಘಟನೆ ಅಕ್ಕಿಯ ಬದಲು ಅಕ್ಕರೆಯಿಂದ ಕನ್ನಡ ಪುಸ್ತಕಗಳನ್ನು ಹಂಚಿದೆ.

ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ಸದಸ್ಯರು ಮಾಸ್ಕ್‌ ಧರಿಸಿ ಮನೆ ಮನೆಗೆ ತೆರಳಿ ಕನ್ನಡದ ಕಂಪು ಪಸರಿಸುವ ಮೂಲಕ ಈ ಘಟಕವು ಇತರ ಕನ್ನಡ ಸಂಘಟನೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ, ಚಿಕ್ಕಬಾಣಾವಾರ, ಹೆಗ್ಗನಹಳ್ಳಿ, ಲಗ್ಗೆರೆ, ಮಲ್ಲಸಂದ್ರ, ಬಾಗಲಗುಂಟೆ ಹಾಗೂ ದಾಸರಹಳ್ಳಿ ಮುಂತಾದ ಪ್ರದೇಶಗಳಲ್ಲಿ ಪರಿಷತ್ತಿನ ಸದಸ್ಯರು ಮನೆಮನೆಗೆ ತೆರಳಿ ಕನ್ನಡ ಪುಸ್ತಕ ವಿತರಿಸಿದ್ದಾರೆ. ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ದಾಸರಹಳ್ಳಿಯ ಬೈಲಪ್ಪ ವೃತ್ತವೊಂದರಲ್ಲೇ ಎರಡೂವರೆ ಸಾವಿರ ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ.

‘ಅಕ್ಕಿ ಹಂಚಲು ನೂರಾರು ಮಂದಿ ಇದ್ದಾರೆ. ಪುಸ್ತಕ ಹಂಚುವವರು ಯಾರಿದ್ದಾರೆ ಹೇಳಿ. ಹಾಗಾಗಿ ನಾವು ಲಾಕ್‌ಡೌನ್‌ ಅವಧಿಯನ್ನು ಕನ್ನಡದ ಬಗ್ಗೆ ಜನರಲ್ಲಿ ತಾಯ್ನುಡಿಯ ಬಗ್ಗೆ ಅಭಿಮಾನ ಮೂಡಿಸಲು ಬಳಸಿಕೊಂಡಿದ್ದೇವೆ’ ಎಂದುಘಟಕದ ಅಧ್ಯಕ್ಷ ವೈ.ಬಿ.ಎಚ್‌.ಜಯದೇವ ‘ಪ್ರಜಾವಾಣಿ’ಗೆ ತಿಳಿಸಿದರು. ‌

ADVERTISEMENT

‘ಒಟ್ಟು 8ಸಾವಿರಕ್ಕೂ ಅಧಿಕ ಕೃತಿಗಳನ್ನು ಎರಡು ತಿಂಗಳಲ್ಲಿ ಜನರಿಗೆ ನೀಡಿದ್ದೇವೆ. ನಾಡಿನ ನಾಯಕರ ಹಾಗೂ ದೇಶಭಕ್ತರ ಜೀವನ ಚರಿತ್ರೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ರಾಷ್ಟ್ರ ಕವಿಗಳ ಪುಸ್ತಕಗಳನ್ನು, ಖ್ಯಾತ ಕಾದಂಬರಿಗಳು, ಮಕ್ಕಳಿಗಾಗಿ ನೀತಿಕಥೆಗಳ ಪುಸ್ತಕಗಳನ್ನು ಹೆಚ್ಚಾಗಿ ಹಂಚಿದ್ದೇವೆ. ಲಾಕ್‌ಡೌನ್‌ ಅವಧಿಯಲ್ಲಿ ಜನ ಮನೆಯ ನಾಲ್ಕು ಗೋಡೆಗಳ ನಡುವೆಯೇ ಇದ್ದರು. ಈ ಅವಧಿಯಲ್ಲಿ ಪುಸ್ತಕ ಹಂಚಿದರೆ ಜನ ಖಂಡಿತಾ ಓದುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪುಸ್ತಕ ಹಂಚಲು ಸ್ಥಳೀಯ ಪ್ರಮುಖರಾದ ಮುನಿರಾಜು, ಎನ್. ಲೋಕೇಶ್, ಶೆಟ್ಟಿಹಳ್ಳಿ ಸುರೇಶ್, ಗಂಗರಾಜು, ಸಾಹಿತಿ ದ್ವಾರನಕುಂಟೆ ಪಾತಣ್ಣ, ಕಾದಂಬರಿಕಾರರಾದ ಪ್ರಸನ್ನಕುಮಾರ್, ಕತೆಗಾರ ನಾಗರಾಜ ನಾಗಸಂದ್ರ , ವಿನೋದ್ ಗೌಡ ಮುಂತಾದವರು ನೆರವಾಗಿದ್ದಾರೆ’ ಎಂದು ಅವರು ಸ್ಮರಿಸಿದರು.

ಗೋಕಾಕ್ ಚಳುವಳಿಯ ಆದಿಯಾಗಿ ವಿವಿಧ ಕನ್ನಡ ಹೋರಾಟಗಳಲ್ಲಿ ತೊಡಗಿರುವಜಯದೇವ್‌, ಬಯಲಿನೊಳಗೆ, ಕಲ್ಲರಳಿ ಹೂವಾಗಿ, ಚಿತ್ರಾಂಜಲಿ, ನಾ ಒಲಿದಂತೆ ಹಾಡುವೆ, ಕನ್ನಡ ಝೇಂಕಾರ, ಕನ್ನಡ ಐಸಿರಿ, ಕನ್ನಡ ಡಿಂಡಿಮ... ಮುಂತಾದ ಕೃತಿಗಳ ಲೇಖಕರೂ ಹೌದು. ಅವರ ಅವಧಿಯಲ್ಲಿ ಕಸಪಾದ ದಾಸರಹಳ್ಳಿ ಘಟಕವು ಶಾಲೆಗಳಲ್ಲಿ ಕನ್ನಡ, ಮನೆಯ ಹಜಾರದಲ್ಲಿ‌ ಕನ್ನಡ ವಿಚಾರ, ಕವಿಗಳ ಮನೆಯಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮ, ಕಾವ್ಯ ಹಾಗೂ ಕತಾ ಕಮ್ಮಟ, ಕವಿಗೋಷ್ಠಿ, ದತ್ತಿ ಉಪನ್ಯಾಸ, ವಿಚಾರಸಂಕಿರಣದಂತಹ ಅನೇಕ ಕಾರ್ಯಕ್ರಮಗಳನ್ನೂ ಏರ್ಪಡಿಸಿದೆ. ಸರ್ಕಾರಿ ಕಚೇರಿ ಹಾಗೂ ಬಿಬಿಎಂಪಿ ಸದಸ್ಯರ ಕಚೇರಿಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಿದೆ. ‘ಪರಭಾಷಿಕರಿಗೆ ಕನ್ನಡ ಕಲಿಕೆ ಅಭಿಯಾನ’ದ ಮೂಲಕ ನೂರಾರು ಮಂದಿಗೆ ಕನ್ನಡದ ಕಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.