ADVERTISEMENT

ಠಾಣೆ ಮೇಲೆ ದಾಳಿ ನಡೆದರೂ ಮಾತನಾಡದ ಕಾಂಗ್ರೆಸ್ಸಿಗರಿಗೆ ಏನಾಗಿದೆ? ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 15:26 IST
Last Updated 17 ಏಪ್ರಿಲ್ 2022, 15:26 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಹೊಸಪೇಟೆ (ವಿಜಯನಗರ): ‘ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದರೂ ಅದರ ಬಗ್ಗೆ ಒಂದು ಮಾತನಾಡದ ಕಾಂಗ್ರೆಸ್ಸಿಗರಿಗೆ ಏನಾಗಿದೆ? ಠಾಣೆ ಮೇಲಿನ ದಾಳಿ ಸರಿಯೇ? ಹಿಂಸೆ ನಡೆದರೂ ವಿರೋಧ ಪಕ್ಷದಲ್ಲಿದ್ದು ಖಂಡಿಸದಿರುವುದು ಎಷ್ಟು ಸರಿ?’

ಹೀಗೆ ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ಸಿಗರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಭಾನುವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಅಧಿಕಾರ, ಮತ ಬ್ಯಾಂಕ್‌ ಮುಖ್ಯವಾಗಿದೆ. ದೇಶ, ರಾಜ್ಯ ಮುಖ್ಯವಲ್ಲ. ಸಣ್ಣ ಘಟನೆ ನಡೆದರೆ ಹುಯಿಲು ಎಬ್ಬಿಸುತ್ತಾರೆ. ಹುಬ್ಬಳ್ಳಿ ಠಾಣೆ ಮೇಲೆ ದಾಳಿ ನಡೆಸಿದವರ ವಿರುದ್ಧ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಹಿಜಾಬ್‌ ವಿವಾದ ಬಹಳ ಸಣ್ಣ ವಿಷಯವಾಗಿತ್ತು. ಬೇಗ ಕೊನೆಗೊಳ್ಳಬಹುದಿತ್ತು. ಆದರೆ, ಕಾಂಗ್ರೆಸ್ಸಿನ ವಕೀಲರು ಅದರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಕಾನೂನಿಗೆ ಗೌರವ ಕೊಡದಿದ್ದರೆ ಶಾಂತಿ ನೆಲೆಸುತ್ತದೆಯೇ? ಬೆಂಗಳೂರಿನಲ್ಲಿ ಅವರ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದರೂ ಒಂದು ಮಾತಾಡಲಿಲ್ಲ. ನಿಮಗೆ ಶಾಸಕರು, ಶಾಂತಿ ಬೇಕಿಲ್ಲವೇ? ಎಂದು ಕೇಳಿದರು.

ADVERTISEMENT

ನಮ್ಮ ಪಕ್ಷದಲ್ಲಿನ ಭಿನ್ನ ವಿಚಾರಗಳಿಂದ 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆದರೆ, ಅತಿ ಹೆಚ್ಚು ಕೋಮು ಗಲಭೆಗಳು ನಡೆದವು. ಅನೇಕ ಕಡೆ ಹಿಂದೂ ಯುವಕರ ಕಗ್ಗೊಲೆಗಳಾದವು. ಎಲ್ಲಿ ನೋಡಿದರಲ್ಲಿ ಕೊಲೆ, ಹಿಂಸೆ ನಡೆಯಿತು. ಅದಕ್ಕೆಲ್ಲ ಕಾರಣವಾಗಿದ್ದ ಪಿಎಫ್‌ಐ ಸಂಘಟನೆಯ 200 ಸದಸ್ಯರ ವಿರುದ್ಧದ ಪ್ರಕರಣಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಮತ ಬ್ಯಾಂಕಿಗಾಗಿ ಅಶಾಂತಿ ಸೃಷ್ಟಿಸುವ ಸಂಘಟನೆಗಳಿಗೆ ಕುಮ್ಮಕ್ಕು ಕೊಟ್ಟಿದ್ದು ಸರಿಯೇ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.