ADVERTISEMENT

ಬೈರಿಗೆಯಾಗಿ ಕೊರೆದ ‘ಅನರ್ಹತೆ’ ಅಸ್ತ್ರ

ಸಿದ್ದರಾಮಯ್ಯ ಪ್ರಹಾರಕ್ಕೆ ತತ್ತರಿಸಿದ ವಿಶ್ವನಾಥ; ನಿಜವಾದ ಜಿಟಿಡಿ ಭವಿಷ್ಯವಾಣಿ

ವಿಶಾಲಾಕ್ಷಿ
Published 9 ಡಿಸೆಂಬರ್ 2019, 20:30 IST
Last Updated 9 ಡಿಸೆಂಬರ್ 2019, 20:30 IST
ಎಚ್‌. ವಿಶ್ವನಾಥ್ (ಬಿಜೆಪಿ)
ಎಚ್‌. ವಿಶ್ವನಾಥ್ (ಬಿಜೆಪಿ)   

ಹುಣಸೂರು: ದೇವರಾಜ ಅರಸು ಹೆಸರು ಹೇಳಿಕೊಂಡು ‘ಅರ್ಹ’ತೆ ಪಡೆಯುವ ಅಡಗೂರು ಎಚ್‌. ವಿಶ್ವನಾಥ್‌ ನಿರೀಕ್ಷೆ ಹುಸಿಯಾಗಿದೆ. ಉಪ ಚುನಾವಣೆ ಘೋಷಣೆಗೆ ಮುನ್ನವೇ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಕುರಿತು ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಕ್ಕಾಗಿ ವಿಶ್ವನಾಥ್‌ ಕೇಳಿದ ಕ್ಷಮೆ, ಸಮ್ಮಿಶ್ರ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನವಾಯಿತು ಎಂದು ತೋಡಿಕೊಂಡ ಅಳಲು ಜನರ ಮನಸ್ಸನ್ನು ಮುಟ್ಟಲಿಲ್ಲ. ಬದಲಿಗೆ, ತಮ್ಮೊಂದಿಗೆ ಕ್ಷೇತ್ರದ ಮರ್ಯಾದೆಯನ್ನೂ ಹರಾಜು ಹಾಕಿದರೆಂದು ಸಿಟ್ಟಿಗೆದ್ದಿದ್ದರು. ಕೋಮುವಾದಿಯೆಂದು ತಾವೇ ಜರಿದಿದ್ದ ಪಕ್ಷದ ಅಭ್ಯರ್ಥಿಯಾಗಿ, ಹೊಸ ಚಿಹ್ನೆಯೊಂದಿಗೆ ಮತ ಕೇಳಬೇಕಾಗಿ ಬಂದ ಸವಾಲು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಶಾಸಕ ಸಾ.ರಾ.ಮಹೇಶ್‌ ಜೊತೆಗೆ ನಡೆಸಿದ ಆಣೆ–ಪ್ರಮಾಣದ ಪ್ರಹಸನ; ಬಿಜೆಪಿಯಲ್ಲೇ ಉಳಿಯುವ ಬಗೆಗಿನ ಅನುಮಾನ; ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಿ.ಪಿ.ಯೋಗೇಶ್ವರ್‌ಗೆ, ಕೊನೆ ಗಳಿಗೆಯಲ್ಲಿ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗಿ ಬಂದ ಅಸಮಾಧಾನ ಎಲ್ಲವೂ ವಿಶ್ವನಾಥ್‌ ಗೆಲುವಿನ ಹಾದಿಗೆ ಅಡ್ಡಿಯಾಯಿತು.

ADVERTISEMENT

ಪ್ರಚಾರದುದ್ದಕ್ಕೂ ಮಾತುಮಾತಿಗೆ ‘ಅನರ್ಹ...’ ಎಂದು ತಿವಿಯುತ್ತ ಬಂದ ಸಿದ್ದರಾಮಯ್ಯ, ಆ ಪದವು ಜನರ ಮನಸ್ಸಲ್ಲಿ ನೆಲೆ ನಿಲ್ಲುವಂತೆ ನೋಡಿಕೊಂಡರು. ಪರಿಣಾಮವಾಗಿ, ವಿಶ್ವನಾಥ್‌ ಪರ ಮತ ಕೇಳಲು ಹೋದ ಹಲವೆಡೆ ಬಿಜೆಪಿ ಮುಖಂಡರು ಘೇರಾವ್‌ ಎದುರಿಸಿದರು.

ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಕ್ಷೇತ್ರದ ಜನರ ಒಡನಾಟದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ ಪರವಾಗಿದ್ದ ಅನುಕಂಪದ ಅಲೆ; ‘ಅನರ್ಹ’ರನ್ನು ಸೋಲಿಸುವ ಅಜೆಂಡಾದ ಭಾಗವಾಗಿ, ಜೆಡಿಎಸ್‌ ಮತಗಳು ಕಾಂಗ್ರೆಸ್‌ ಕೈಹಿಡಿಯಬಹುದು ಎನ್ನುವ ಲೆಕ್ಕಾಚಾರ ಹಾಗೂ ಮಗನಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿಗೆ ಕ್ಷೇತ್ರವನ್ನು ಸುಲಭದ ತುತ್ತಾಗಿಸಬಾರದು ಎಂದು ಜಿ.ಟಿ.ದೇವೇಗೌಡ ಹೆಣೆದ ತಂತ್ರಗಾರಿಕೆಯು ವಿಶ್ವನಾಥ್‌ ಗೆಲುವಿನ ಕನಸನ್ನು ಭಗ್ನಗೊಳಿಸಿದವು.

***

ತಮ್ಮ ತಪ್ಪಿಗೆ ಬೇಷರತ್‌ ಕ್ಷಮೆ ಕೇಳದ ವಿಶ್ವನಾಥ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ಹುಣಸೂರು ಜನರ ಗೆಲುವು. ಅವರು ಹಣಕ್ಕಾಗಿ ತಮ್ಮ ಮತವನ್ನು ಮಾರಲಿಲ್ಲ.
- ಎಚ್‌.ಪಿ.ಮಂಜುನಾಥ್‌, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.