ಮೈಸೂರು: ‘ಕೇಂದ್ರ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಡಿಮೆ ಅನುದಾನ ಕೊಟ್ಟಿದೆ. ಅದನ್ನು ಕೇಳದ ನೀವು, ₹ 39ಸಾವಿರ ಕೋಟಿ ಕೊಡುತ್ತಿರುವ ನಮ್ಮ ತಲೆ ಮೇಲೆಯೇ ಒಡೆಯುತ್ತೀರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಟಿ.ಕೆ. ಲೇಔಟ್‌ನಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಶನಿವಾರ ಅಹವಾಲು ಸಲ್ಲಿಸಿದ ದಸಂಸ ಮುಖಂಡರೊಂದಿಗೆ ಮಾತನಾಡಿದ ಅವರು, ‘ನಿಮಗೆ ಹಿಂದೆ ಬಹಳ ಹೆಚ್ಚೆಂದರೆ ಒಂದೂವರೆ ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದರು. ನಾನು ಮುಖ್ಯಮಂತ್ರಿಯಾದ ಮೇಲೆ ₹ 39,121 ಕೋಟಿ ಕೊಡುತ್ತಿದ್ದೇನೆ. ಆದರೆ, ಕೇಂದ್ರ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ₹ 65ಸಾವಿರ ಕೋಟಿಯನ್ನಷ್ಟೆ ಕೊಟ್ಟಿದ್ದಾರೆ. ಅದನ್ನೇಕಯ್ಯಾ ನೀವು ಕೇಳುವುದಿಲ್ಲ. ಎಷ್ಟು ಹಣ ಕೊಡಬೇಕಿತ್ತು ನಿಮಗೆ? ಮೋದಿಯನ್ನೇಕೆ ಕೇಳುವುದಿಲ್ಲ?’ ಎಂದು ಪ್ರಶ್ನಿಸಿದರು.
‘ಪರಿಶಿಷ್ಟರ ಹಣ ಅವರಿಗೆ ಮಾತ್ರವೇ ಬಳಕೆಯಾಗಬೇಕು ಎಂದು ಕಾನೂನು ಮಾಡಿದ್ದೇ ನಾನು. ಅದನ್ನು ಬಿಜೆಪಿಯವರೇನೂ ಮಾಡಿರಲಿಲ್ಲ. ಅದಕ್ಕಾಗಿ ಅವರನ್ನೇಕೆ ನೀವು ಪ್ರಶ್ನಿಸುವುದಿಲ್ಲ?’ ಎಂದು ಕೇಳಿದರು.
‘ಡಾ.ಎಚ್.ಸಿ. ಮಹದೇವಪ್ಪ ಅವರನ್ನೇ ಸಮಾಜ ಕಲ್ಯಾಣ ಸಚಿವರನ್ನಾಗಿ ಮಾಡಿದ್ದೇನೆ. ನಾನು ಯಾವುದಕ್ಕೂ ಅನುಮತಿ ಕೊಡಬೇಕಿಲ್ಲ. ತಾನಾಗಿಯೇ ಅನುದಾನ ದೊರೆಯುತ್ತದೆ. ನಿಮಗೆ ಬೇಕಾದ ಅನುಕೂಲಗಳನ್ನೆಲ್ಲಾ ಮಾಡೋಣ’ ಎಂದು ಭರವಸೆ ನೀಡಿದರು.
ಪರಿಚಿತರನ್ನು ಆತ್ಮೀಯವಾಗಿ ಮಾತನಾಡಿಸಿದ ಅವರು, ಎಲ್ಲರಿಂದಲೂ ಮನವಿ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.