ADVERTISEMENT

ಕೋವಿಡ್‌ ಲಸಿಕೆ ಪಡೆಯಲು ಏಕೆ ಹಿಂಜರಿಕೆ?

ಲಸಿಕೆ ಹಾಕಿಸಿಕೊಳ್ಳಲು ಜನರ ಹಿಂದೇಟು: ಮೌಢ್ಯ, ತಪ್ಪು ತಿಳಿವಳಿಕೆ, ಜಾಗೃತಿ ಕೊರತೆ ಕಾರಣ

ಸುಕೃತ ಎಸ್.
Published 19 ಜೂನ್ 2021, 22:13 IST
Last Updated 19 ಜೂನ್ 2021, 22:13 IST
ಪುರಾಣಿ ಪೋಡಿನ ಸೋಲಿಗರನ್ನು ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸುವುದಕ್ಕಾಗಿ ಶಾಸಕ ಎನ್‌.ಮಹೇಶ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಸೋಲಿಗರ ಮನೆಗಳತ್ತ ಹೆಜ್ಜೆ ಹಾಕಬೇಕಾಯಿತು
ಪುರಾಣಿ ಪೋಡಿನ ಸೋಲಿಗರನ್ನು ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸುವುದಕ್ಕಾಗಿ ಶಾಸಕ ಎನ್‌.ಮಹೇಶ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಸೋಲಿಗರ ಮನೆಗಳತ್ತ ಹೆಜ್ಜೆ ಹಾಕಬೇಕಾಯಿತು   

ಬೆಂಗಳೂರು:‘ದೇವಿ ಮುನಿಸಿಕೊಂಡಿದ್ದರಿಂದ ಕೋವಿಡ್‌ನಂತಹ ಗಂಡಾಂತರ ಬಂದಿದೆ. ದೇವಿಯನ್ನು ಸಂಪ್ರೀತಗೊಳಿಸಬೇಕು. ಲಸಿಕೆ ಹಾಕಿದರೆ ಕೊರೊನಾ ತೊಲಗದು’ ಎಂಬ ಭಾವನೆ ರಾಜ್ಯದ ವಿವಿಧ ಭಾಗಗಳ ಜನರಲ್ಲಿ ಇದೆ. ಇಂತಹ ಮೌಢ್ಯ, ತಪ್ಪುಗ್ರಹಿಕೆಗಳೇ ಕೋವಿಡ್‌ ಲಸಿಕೆ ಅಭಿಯಾನಕ್ಕೆ ದೊಡ್ಡ ತೊಡಕಾಗಿವೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ಪ್ರಮುಖ ಅಸ್ತ್ರ. ಶೇ 50ರಿಂದ ಶೇ 90ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಉಂಟಾದಾಗ ಮಾತ್ರ ಸಮೂಹ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಪರಿಣತರು ಹೇಳುತ್ತಿದ್ದಾರೆ. ಈ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗದಿದ್ದರೆ ಕೋವಿಡ್‌ನಿಂದ ರಕ್ಷಣೆ ಸಾಧ್ಯವಿಲ್ಲ. ಆದರೆ, ಲಸಿಕೆಯ ಬಗ್ಗೆ ಜನರಲ್ಲಿ ಇರುವ ಹಿಂಜರಿಕೆ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗಿದೆ.

ಲಸಿಕಾ ಕೇಂದ್ರ ದೂರ ಇರುವುದು, ಆನ್‌ಲೈನ್‌ ನೋಂದಣಿಯ ಸಮಸ್ಯೆ, ಆಧಾರ್‌ ಕಾರ್ಡ್‌ ಅಥವಾ ಗುರುತಿನ ಚೀಟಿ ಇಲ್ಲದಿರುವುದೇ ಮುಂತಾದ ಸಮಸ್ಯೆಗಳೂ ಲಸಿಕೆ ಅಭಿಯಾನದ ಹಿನ್ನಡೆಗೆ ಕಾರಣವಾಗಿವೆ.

ADVERTISEMENT

ತಪ್ಪು ತಿಳಿವಳಿಕೆಗಳು: ಲಸಿಕೆ ಪಡೆದುಕೊಂಡರೆ ಎರಡು– ಮೂರು ವರ್ಷಗಳಲ್ಲಿ ಸತ್ತು ಹೋಗುತ್ತೇವೆ, ದೇಹದ ಮೇಲೆ ಹಲವು ಅಡ್ಡ ಪರಿಣಾಮಗಳು ಆಗುತ್ತವೆ, ಎದೆನೋವು ಬರುತ್ತದೆ, ಲಸಿಕೆ ಪಡೆದ ನಂತರ ಒಂದು ತಿಂಗಳ ಕಾಲ ಮದ್ಯ ಸೇವಿಸಬಾರದು, ಮುಂದೆ ಮಕ್ಕಳಾಗುವುದಿಲ್ಲ.... ಹೀಗೆ ತಪ್ಪು ತಿಳಿವಳಿಕೆಗಳ ಪಟ್ಟಿ ಬೆಳೆಯುತ್ತದೆ.

ಲಸಿಕೆಯಲ್ಲಿ ಧಾರ್ಮಿಕ ಭಾವನೆಗೆ ಪೆಟ್ಟು ಬೀಳುವಂಥ ಅಂಶಗಳಿವೆ ಎನ್ನುವ ಕಾರಣಕ್ಕೂ ಕೆಲವು ಧರ್ಮದವರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು.

‘ಲಸಿಕೆ ಪಡೆದುಕೊಂಡರೆ ಹೆಣ್ಣು ಮಕ್ಕಳಲ್ಲಿ ತಲೆಕೂದಲು ಉದುರಲು ಶುರುವಾಗುತ್ತದೆ ಎನ್ನುವ ಕಾರಣಕ್ಕೆ ಹಲವು ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದರಿಂದಲೇ ಕಾಯಿಲೆ ಜಾಸ್ತಿ ಆಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಬರಿ ಕೆಮ್ಮು–ನೆಗಡಿ ಅಷ್ಟೇ, ನೀವು ಸುಮ್ಮನೆ ಪಾಸಿಟಿವ್‌ ವರದಿ ನೀಡುತ್ತೀರಿ, ಇದರಿಂದ ನಿಮಗೆ ಕಮಿಷನ್‌ ಸಿಗುತ್ತದೆ. ನಾವು ಮನೆಯಲ್ಲಿಯೇ ಕಷಾಯ ಮಾಡಿಕೊಂಡು ಕುಡಿಯುತ್ತೇವೆ, ನಮಗೆ ಲಸಿಕೆ ಬೇಡ ಎನ್ನುತ್ತಾರೆ ಹಲವರು’ ಎಂದು ಸಮಸ್ಯೆಯನ್ನು ಬಿಚ್ಚಿಟ್ಟವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ, ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಪಾ ಎಚ್‌.ವಿ.

ಸರ್ಕಾರವು ಹಣ, ಔಷಧಿ ಕೊಟ್ಟರೆ ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಾಗಿಬೀದರ್‌ ಜಿಲ್ಲೆಯ ಔರಾದ್‌ ಮತ್ತು ಕಮಲನಗರ ತಾಲ್ಲೂಕಿನ ಕೆಲ ತಾಂಡಾಗಳ ಜನರು ಹೇಳುತ್ತಾರೆ. ಲಸಿಕೆ ಹಾಕಿಸುವುದರಿಂದ ಸರ್ಕಾರಕ್ಕೆ ಲಾಭವಿದೆ ಎಂಬ ಭಾವನೆ ಅವರಲ್ಲಿದೆ.

‘ನಾವು ಹೊಲದಲ್ಲಿ ಕೆಲಸ ಮಾಡುವವರು. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿಯೇ ಇದೆ. ನಮಗೆ ಲಸಿಕೆಯ ಅಗತ್ಯವಿಲ್ಲ. ನಾವು ನಗರ ಪ್ರದೇಶಗಳಿಗೆ ಹೋಗುವುದೇ ಇಲ್ಲವಾದ್ದರಿಂದ ಕೊರೊನಾ ಸೋಂಕು ನಮಗೆ ಬರುವುದೂ ಇಲ್ಲ’ ಎನ್ನುತ್ತಾರೆ ರಾಯಚೂರು ಜಿಲ್ಲೆಯ ಕೊತ್ತದೊಡ್ಡಿ ಗ್ರಾಮದ ಹನುಮಂತರಾಯ.

‘ಲಸಿಕೆ ಪಡೆದರೂ ಅದರ ಪ್ರಭಾವ 6–8 ತಿಂಗಳು ಇರುತ್ತದಷ್ಟೆ. ನಮ್ಮ ಆಹಾರ ಪದ್ಧತಿ ಚೆನ್ನಾಗಿಯೇ ಇದೆ. ಮನೆಯಲ್ಲಿಯೇ ತುಳಸಿ ಕಷಾಯ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ವಿಜಯಪುರ ಜಿಲ್ಲೆಯ ಹಂಚಿನಾಳದ ಗ್ರಾಮಸ್ಥರೊಬ್ಬರು.

‘ಕೆಲವು ಗ್ರಾಮಗಳಲ್ಲಿ ಲಸಿಕೆ ಪಡೆದ ಕೆಲವು ಹಿರಿಯರು ತೀರಿಕೊಂಡರು. ಲಸಿಕೆಯಿಂದಲೇ ತೀರಿಕೊಂಡಿದ್ದು ಎನ್ನುವುದಕ್ಕೆ ವೈದ್ಯಕೀಯ ಸಾಕ್ಷ್ಯಗಳಿಲ್ಲ. ಆದರೆ, ಈ ಘಟನೆಗಳು ಜನರನ್ನು ಗಾಢವಾಗಿ ಆವರಿಸಿದೆ’ ಎನ್ನುತ್ತಾರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಮಲ್ಲು ಬಿರಾದಾರ.

ಬೇರೆ ಸಮಸ್ಯೆಗಳೂ ಇವೆ: ಈಗ ರೈತರಿಗೆ ಮುಂಗಾರು ಕೆಲಸಗಳ ಕಾಲ. ಬೆಳಿಗ್ಗೆಯೇ ಎದ್ದು ರೈತರು ಹೊಲಗಳಿಗೆ ಹೋಗುವುದರಿಂದ ಲಸಿಕೆ ಕೇಂದ್ರಗಳಿಗೆ ಬರಲು ಸಾಧ್ಯವಾಗುವುದಿಲ್ಲ. ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳು ಹಲವು ಕಿ.ಮೀ ದೂರ ಇರುತ್ತವೆ. ಸಾರಿಗೆ ವ್ಯವಸ್ಥೆ ಇಲ್ಲದವರು ಲಸಿಕಾ ಕೇಂದ್ರ ತಲು‍ಪುವುದೇ ಸಾಹಸ.

‘ಲಸಿಕೆ ಪಡೆಯಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇದು ಕುಗ್ರಾಮಗಳ ಜನರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಜೊತೆಗೆ ಹಲವರಲ್ಲಿ ಸ್ಮಾರ್ಟ್‌ ಫೋನ್‌ಗಳಿಲ್ಲ; ಹಲವರಿಗೆ ಸ್ಮಾರ್ಟ್‌ ಫೋನ್‌ ಬಳಕೆಯ ಬಗ್ಗೆ ಮಾಹಿತಿಯೂ ಇಲ್ಲ. ಇದು ಸಹ ಸಮಸ್ಯೆಯಾಗಿದೆ’ ಎಂದರು ಡಾ. ಕೃಪಾ.

ಜಾಗೃತಿ ಕಾರ್ಯಕ್ರಮ ಎಲ್ಲೆಡೆ ಒಂದೇ ರೀತಿ ಆಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ‘ಕೋವಿಡ್‌ ಬಂದಾಗಿನಿಂದಲೂ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆ ಯಾರೂ ನಮ್ಮ ಮನೆಗೆ ಬಂದಿಲ್ಲ’ ಎನ್ನುತ್ತಾರೆ ಶಿವಮೊಗ್ಗದ ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ನಿವಾಸಿಯೊಬ್ಬರು.

ಸಚಿವರು ಬರುವ ಮುನ್ನವೇ ಕಾಲ್ಕಿತ್ತ ಸೋಲಿಗರು!:

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪುರಾಣಿ ಪೋಡಿಯ ಜನರಿಗೆ, ಜೂನ್‌ 18ರಂದು ಲಸಿಕೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌, ಕೊಳ್ಳೇಗಾಲ ಶಾಸಕ ಎನ್. ಮಹೇಶ್‌ ಅವರೊಂದಿಗೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದಾಗ, ಹಾಡಿಯ ಗಂಡಸರು ಕಾಡಿಗೆ ಕಾಲ್ಕಿತ್ತಿದ್ದರು. ಮಹಿಳೆಯರುಮನೆಯೊಳಗೆ ಕುಳಿತು ಬಾಗಿಲು ಹಾಕಿಕೊಂಡಿದ್ದರು!

ಕೋವಿಡ್‌ ಲಸಿಕೆಯ ಬಗ್ಗೆ ಜಿಲ್ಲೆಯ ಆದಿವಾಸಿಗಳಿಗೆ (ಸೋಲಿಗರು, ಜೇನು ಕುರುಬರು, ಕಾಡು ಕುರುಬರು), ಅದೆಷ್ಟು ಆತಂಕ– ಅಪನಂಬಿಕೆ ಇದೆ ಎನ್ನುವುದಕ್ಕೆ ಇದೊಂದು ನಿದರ್ಶನ.

ಲಸಿಕೆ ಬಗ್ಗೆ ಅವರಲ್ಲಿರುವ ಭಯ ನಿವಾರಣೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯು ಪಂಚಾಯಿತಿಯ ಮೂಲಕ, ಸೋಲಿಗ ಮುಖಂಡರ ನೆರವಿ ನೊಂದಿಗೆ ಜಾಗೃತಿ ಮೂಡಿಸಲು ಯತ್ನಿಸಿದ್ದರು.

ಕೊನೆಗೆ, ‘ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಲಸಿಕೆ ಅಭಿಯಾನ ನಡೆಸೋಣ’ ಎಂಬ ಜಿಲ್ಲಾಡಳಿತದ ಪ್ರಯತ್ನವೂ ಯಶ ಕಾಣದೇ ಹೋಯಿತು.

ಸ್ವತಃ ಸಚಿವರು, ಶಾಸಕರು ಹಲವು ಮನೆಗಳಿಗೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು. ಸ್ಥಳೀಯ ನಿವಾಸಿಯೊಬ್ಬರು, ‘ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ಮತ್ತು ಸದಸ್ಯರು ಇನ್ನೂ ಲಸಿಕೆ ಪಡೆದಿಲ್ಲ. ಇವರುನಮ್ಮನ್ನು ಮಾತ್ರ ಚುಚ್ಚುಮದ್ದು ಪಡೆಯುವಂತೆ ಒತ್ತಾಯಿಸುತ್ತಾರೆ. ಈಗಾಗಲೇ, ಲಸಿಕೆಪಡೆದವರೊಬ್ಬರಿಗೆ ಕಣ್ಣು ಮಂಜಾಗಿದೆ. ನಮಗ ಇಂಥ ತೊಂದರೆ ಕಾಡಬಹುದು. ಹಾಗಾಗಿನಾವು ಲಸಿಕೆ ಪಡೆದಿಲ್ಲ’ ಎಂದು ನೇರವಾಗಿಯೇ ಸಚಿವರಿಗೆ ತಿಳಿಸಿದರು.

140 ರಷ್ಟು ಜನರು ಇರುವ ಪೋಡಿಯಲ್ಲಿ, ಶುಕ್ರವಾರ ಏಳು ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡರು.

ಜಿಲ್ಲೆಯಲ್ಲಿನ 146 ಪೋಡಿಗಳ ಪೈಕಿ, ಆರು ಪೋಡಿಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ನಿಂದಿಸಿದ ಕುಟುಂಬದ ಪಡಿತರ ಚೀಟಿ ರದ್ದತಿಗೆ ಆದೇಶ:

ರಾಯಚೂರು ತಾಲ್ಲೂಕಿನ ದುಗನೂರ ಗ್ರಾಮದ ಯೇಸು ಆನಂದಪ್ಪ ಅವರ ಮನೆಗೆ ಜೂನ್‌ 17ರಂದು ತೆರಳಿದ್ದ ಅಂಗನವಾಡಿ ಕಾರ್ಯಕರ್ತೆ ರಾಧಾವೇಣಿ ಮತ್ತು ಆಶಾ ಕಾರ್ಯಕರ್ತೆ ನಾಗಲಕ್ಷ್ಮೀ ಅವರು, ಆ ಕುಟುಂಬದ 45 ವರ್ಷದ ಸುಶೀಲಮ್ಮ ಅವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ಆದರೆ, ಲಸಿಕೆ ಹಾಕಿಸಿಕೊಳ್ಳಲು ಸಮ್ಮತಿಸದೇ ಮನೆಯಲ್ಲಿದ್ದವರು ಇವರನ್ನು ನಿಂದಿಸಿದರು ಎಂಬ ಕಾರಣಕ್ಕೆ ಯೇಸು ಆನಂದಪ್ಪ ಕುಟುಂಬದ ಪಡಿತರ ಚೀಟಿ ರದ್ದು ಪಡಿಸಲು ಮತ್ತು ಅವರ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಆದೇಶಿಸಿದ್ದು, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ ಹಾಗೂ ರಂಗಪ್ಪ ಅವರಿಗೂ ನೋಟಿಸ್‌ ನೀಡಿದ್ದಾರೆ. ‘ಕೋವಿಡ್‌ ನಿಯಂತ್ರಣದ ಗ್ರಾಮೀಣ ಕಾರ್ಯಪಡೆ ಸದಸ್ಯರಾದ ನೀವು ಕೊರೊನಾ ವಾರಿಯರ್ಸ್‌ಗಳ ನೆರವಿಗೆ ಬಂದಿಲ್ಲ.ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ತೋರಿದ್ದು, ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದತಿಗೆ ಏಕೆ ಕ್ರಮ ಕೈಗೊಳ್ಳಬಾರದು’ ಎಂಬುದಕ್ಕೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.