ADVERTISEMENT

ಪಕ್ಷ ಬಿಟ್ಟು ಹೋದವರ ಬಗ್ಗೆ ನಾನ್ಯಾಕೆ ಮಾತನಾಡಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 7:17 IST
Last Updated 28 ನವೆಂಬರ್ 2020, 7:17 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಯಡಿಯೂರಪ್ಪ ನಾಯಕತ್ವ ಬದಲಾಗುತ್ತೋ ಇಲ್ಲವೋ ಗೊತ್ತಿಲ್ಲ. ಎಂಟಿಬಿ ನಾಗರಾಜ್, ಶಂಕರ್ ಅವರನ್ನೆಲ್ಲ ಮಂತ್ರಿ ಮಾಡಲಿ ಬಿಡಲಿ ನನಗೇನಾಬೇಕು. ವ್ಯಾಪಾರ ಮಾಡಿಕೊಂಡು ಹೋಗಿರೋರು ಅವರು. ಅವರು ಏನು ವ್ಯಾಪಾರ ಮಾಡ್ಕೊಂಡಿದ್ದಾರೋ ನನಗೇನು ಗೊತ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು. ಪಕ್ಷ ಬಿಟ್ಟು ಹೋದವರ ವಿಚಾರದಲ್ಲಿ‌ ನಾನು ಪಾರ್ಟಿನೂ ಅಲ್ಲ, ಸಾಕ್ಷಿಯೂ ಅಲ್ಲ. ನಾನ್ಯಾಕೆ ಅವರ ಪರ ಮಾತಾಡಲಿ’ ಎಂದು ವಾಗ್ದಾಳಿ ನಡೆಸಿದರು.

ವೀರಶೈವ– ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಷಯದ ಕುರಿತು ಪ್ರತಿಕಿಯಿಸಿದ ಅವರು, ‘ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಯಾವುದೇ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಬರಲ್ಲ. ಇತ್ತೀಚೆಗಷ್ಟೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ’ ಎಂದರು.

ADVERTISEMENT

‘ಹಿಂದುಳಿದ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಏನಾದರೊಂದು ಆಧಾರ ಬೇಕಲ್ಲ. ಏನಿದೆ, ಯಾವ ವರದಿ ಇದೆ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ನಾನು ಯಾವುದೇ ಸಮುದಾಯದ ಪರವೂ ಇಲ್ಲ, ವಿರುದ್ಧವೂ ಇಲ್ಲ. ಆದರೆ, ಯಾವ್ಯಾವ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ಪಡೆಯುವ ಅರ್ಹತೆ ಇದೆಯೋ, ಆ ಎಲ್ಲ ಸಮುದಾಯಗಳಿಗೂ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಹೀಗೆ ಶಿಫಾರಸು ‌ಮಾಡಲು ಬರಲ್ಲ ಎಂದು ಗೊತ್ತಾಗಿದ್ದರಿಂದಲೇ ಸಚಿವ ಸಂಪುಟ ಕಾರ್ಯಸೂಚಿಯಿಂದ ಹಿಂಪಡೆದಿರಬೇಕೆಂದು ನಾನು ಅಂದುಕೊಂಡಿದ್ದೇನೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.