ADVERTISEMENT

ಯುಪಿಎ ಸರ್ಕಾರದಲ್ಲಿ ಜಾತಿ ಗಣತಿ ಏಕೆ ಮಾಡಿಸಲಿಲ್ಲ?: ಸಂಸದ ಪಿ.ಸಿ.ಮೋಹನ್‌

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:08 IST
Last Updated 2 ಮೇ 2025, 14:08 IST
ಪಿ.ಸಿ. ಮೋಹನ್‌ 
ಪಿ.ಸಿ. ಮೋಹನ್‌    

ಬೆಂಗಳೂರು: ‘60 ವರ್ಷಗಳವರೆಗೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಜಾತಿ ಗಣತಿಯನ್ನು ಏಕೆ ನಡೆಸಲಿಲ್ಲ’ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿಯವರ ಒತ್ತಡದಿಂದ ನರೇಂದ್ರ ಮೋದಿ ಅವರು ಜಾತಿ ಗಣತಿ ಮಾಡಲು ಮುಂದಾಗಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. 2004ರಿಂದ 2014ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿತ್ತು. ಆಗ ರಾಹುಲ್‌ ಅವರು ಮನಮೋಹನ್‌ಸಿಂಗ್ ಅವರ ಮೇಲೆ ಒಂದು ದಿನವಾದರೂ ಜನಗಣತಿಗೆ ಒತ್ತಾಯ ಮಾಡಿದ್ದರೆ? ಆಗ ಒತ್ತಡ ಏಕೆ ಹಾಕಲಿಲ್ಲ ಎಂದು ಸಿದ್ದರಾಮಯ್ಯ ಅವರು ರಾಹುಲ್‌ ಅವರನ್ನು ಪ್ರಶ್ನಿಸಬೇಕು’ ಎಂದು ಒತ್ತಾಯಿಸಿದರು.

‘ಶೇ 50 ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಸಿದ್ದರಾಮಯ್ಯ ಅವರು ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಕೊಡಬೇಕೆಂದು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಜನಗಣತಿಗೆ ₹575 ಕೋಟಿ ಹಣ ಸಾಕಾಗುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ, ನಮ್ಮ ಸರ್ಕಾರ ಜಾತಿ ಗಣತಿ ವಿಚಾರದಲ್ಲಿ ಬದ್ಧವಾಗಿದೆ. ಹೆಚ್ಚುವರಿ ಮೊತ್ತ ಅಗತ್ಯವಿದ್ದಾಗ ಅದನ್ನು ಒದಗಿಸುತ್ತದೆ. ಬ್ರಿಟಿಷ್‌ ಆಡಳಿತದಲ್ಲಿ 1931ರಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆದಿತ್ತು. ಆ ಬಳಿಕ ಜಾತಿ ಗಣತಿ ಮಾಡಲು ನಿರ್ಣಯಿಸಿದ್ದು ಮೋದಿ ಸರ್ಕಾರ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಒಬಿಸಿ ಜತೆ ಇದ್ದೇವೆ ಎಂದು ಕಾಂಗ್ರೆಸ್‌ ಹೇಳಿಕೊಂಡೇ ಬಂದಿತ್ತು. ಆದರೆ, ಈವರೆಗೂ ಈ ಸಮುದಾಯಗಳಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಯದುವೀರ ಒಡೆಯರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.