ADVERTISEMENT

PHOTOS | 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 14:20 IST
Last Updated 18 ನವೆಂಬರ್ 2025, 14:20 IST
<div class="paragraphs"><p>ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು.&nbsp;</p></div>

ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು. 

   

ಶನಿವಾರ ರಾತ್ರಿ ವಿದ್ಯುತ್ ಘಟಕದ ಬಳಿ ಸುತ್ತಾಡುತ್ತಿದ್ದ 12 ವರ್ಷದ ಗಂಡು ಕಾಡಾನೆಯು ನೀರು ಕುಡಿಯಲು ಗೇಟ್ ಮೂಲಕ ನಾಲೆಗೆ ಇಳಿದಿತ್ತು.

ಆದರೆ, ನೀರಿನ ಹರಿವಿನ ರಭಸಕ್ಕೆ ವಾಪಸ್‌ ಕಾಲುವೆಯಿಂದ ಮೇಲೆ ಬಾರದ ಆನೆಯು ಕಳೆದ ಮೂರು ದಿನಗಳಿಂದ ಕಾಲುವೆಯಲ್ಲಿಯೇ ಓಡಾಡಿ ನಿತ್ರಾಣಗೊಂಡಿತ್ತು. 

ADVERTISEMENT

ಸೋಮವಾರ ದಿನವಿಡೀ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಮಂಗಳವಾರ ಕ್ರೇನ್‌ ಮತ್ತು ಡ್ರೋಣ್‌ ಸಹಾಯದಿಂದ ಕಾರ್ಯಾಚರಣೆ ಆರಂಭಗೊಂಡಿತು. 

ಬೆಂಗಳೂರಿನ ಬಂದಿದ್ದ ಬೃಹತ್‌ ಕ್ರೇನ್ ಹಾಗೂ ಸ್ಥಳೀಯವಾಗಿ 2 ಕ್ರೇನ್‌ಗಳ ಮೂಲಕ ಮೊದಲಿಗೆ ಒಂದು ಕಂಟೇನರ್‌ ಅನ್ನು ಕಾಲುವೆಗೆ ಇಳಿಸಿ ಆನೆಯನ್ನು ಮೇಲೆತ್ತುವ ಪ್ರಯತ್ನ ನಡೆಸಲಾಯಿತು. ‌

ಅದು ಫಲ ನೀಡದ ಹಿನ್ನೆಲೆಯಲ್ಲಿ, ಮಧ್ಯಾಹ್ನ ಪಟಾಕಿ ಸಿಡಿಸಿ ಕಾಲುವೆ ಮಧ್ಯಭಾಗಕ್ಕೆ ಆನೆ ಬಂದ ನಂತರ, ತಜ್ಞರ ತಂಡ ಕಾಡಾನೆಗೆ ಅರಿವಳಿಕೆ ಮದ್ದು ನೀಡಿದರು. 

 ಸುಮಾರು 30 ನಿಮಿಷ ಆನೆಯು ಅಲ್ಲಿಯೇ ಓಡಾಟ ನಡೆಸಿ ಪ್ರಜ್ಞೆ ಕಳೆದುಕೊಂಡ ಬಳಿಕ, ಆನೆಗೆ ಅಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿದರು.

ರಕ್ಷಣಾ ಸಿಬ್ಬಂದಿ ಹೈಡ್ರಾಲಿಕ್ ಕ್ರೇನ್ ಮತ್ತು ಹಗ್ಗಗಳನ್ನು ಬಳಸಿ, ಕಂಟೇನರ್ ಹಾಗೂ ಸ್ಟ್ರೆಚರ್ ಮೇಲೆ ಆನೆಯನ್ನು ಮಲಗಿಸಿ, ಅತ್ಯಂತ ಎಚ್ಚರಿಕೆಯಿಂದ 60 ಅಡಿ ಆಳದ ಕಾಲುವೆಯಿಂದ ಮೇಲೆ ತಂದರು.

ಪ್ರಥಮ ಚಿಕಿತ್ಸೆ ನೀಡಿದ ನಂತರ, ಆರೋಗ್ಯ ಸ್ಥಿತಿಯನ್ನು ಖಾತ್ರಿಪಡಿಸಿಕೊಂಡು ಪಕ್ಕದಲ್ಲೇ ಇದ್ದ ಕಾವೇರಿ ವನ್ಯಜೀವಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು. 

ಮಂಡ್ಯ ಡಿಸಿಎಫ್ ಡಿ.ರಘು ಮತ್ತು ಮೈಸೂರು ವಿಭಾಗದ ವನ್ಯಜೀವಿ ವಲಯದ ಡಿಸಿಎಫ್ ಪ್ರಭುಗೌಡ ಬಿರಾದಾರ್‌ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. 

100ಕ್ಕೂ ಅಧಿಕ ಮಂದಿ ಕಾರ್ಯಾಚರಣೆ ನಡೆಸಿದರು.

4 ಗಂಟೆ ಕ್ರೇನ್‌ ಕಾರ್ಯಾಚರಣೆ ಯಶಸ್ವಿ: ಅರಣ್ಯ ಸೇರಿದ ಗಜರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.