ADVERTISEMENT

ಅರ್ಜುನನ ಸಾವಿಗೆ ಕಾರಣವಾಗಿದ್ದ ಕಾಡಾನೆ 'ಸಾರಾ ಮಾರ್ಟಿನ್‌’ ಸೆರೆ!

ಸಾರಾ ಎಸ್ಟೇಟ್‌ನಲ್ಲಿ ಕಾರ್ಯಾಚರಣೆ: ಮತ್ತಿಗೋಡು ಆನೆ ಕ್ಯಾಂಪ್‍ಗೆ ರವಾನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 20:19 IST
Last Updated 13 ಜನವರಿ 2024, 20:19 IST
ಆಲೂರು ತಾಲ್ಲೂಕು ಸಾರಾ ಎಸ್ಟೇಟ್‍ನಲ್ಲಿ ‘ಸಾರಾ ಮಾರ್ಟಿನ್’ ಕಾಡಾನೆಯನ್ನು ಸಾಕು ಆನೆಗಳು ಸುತ್ತುಗಟ್ಟಿರುವುದು
ಆಲೂರು ತಾಲ್ಲೂಕು ಸಾರಾ ಎಸ್ಟೇಟ್‍ನಲ್ಲಿ ‘ಸಾರಾ ಮಾರ್ಟಿನ್’ ಕಾಡಾನೆಯನ್ನು ಸಾಕು ಆನೆಗಳು ಸುತ್ತುಗಟ್ಟಿರುವುದು   

ಆಲೂರು: ತಾಲ್ಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿದ್ದ ‘ಸಾರ ಮಾರ್ಟಿನ್’ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸೆರೆ ಹಿಡಿದರು.  ಆನೆಯನ್ನು ಮತ್ತಿಗೋಡು ಆನೆ ಕ್ಯಾಂಪ್‍ಗೆ ಲಾರಿಯಲ್ಲಿ ಸಾಗಿಸಲಾಯಿತು.

ಜ.12 ರಂದು ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಉಪ ನಿರ್ದೇಶಕ ಸೌರತ್‍ಕುಮಾರ್ ನೇತೃತ್ವದಲ್ಲಿ, ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ನಲ್ಲಿ ಪ್ರಾರಂಭಿಸಲಾಯಿತು.

ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳನ್ನು ಬಳಸಲಾಯಿತು.

ADVERTISEMENT

ಎಸ್ಟೇಟ್‍ನಲ್ಲಿ ಕಾಡಾನೆ ಬೀಡು ಬಿಟ್ಟಿದ್ದರಿಂದ ಸ್ಥಳೀಯರು ‘ಸಾರಾ ಮಾರ್ಟೀನ್’ ಎಂದು ಕರೆಯುತ್ತಿದ್ದರು. ಒಂಟಿಯಾಗಿ ಓಡಾಡಿಕೊಂಡಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದರೂ ಜನರಿಗೆ ತೊಂದರೆ ಆಗಿರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದಾಗ, ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಸಾವನ್ನಪ್ಪಿತ್ತು. ಅದಕ್ಕಿಂತ ಮೊದಲು, ಶಾರ್ಪ್ ಶೂಟರ್ ವೆಂಕಟೇಶ್ ಭೀಮ ಎಂಬ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.

‘ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಇಲಾಖೆ ಸೂಚನೆಯಂತೆ ಉಳಿದ ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಎಫ್‌ಒ ಸೌರತ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.