ADVERTISEMENT

ರಾಜ್ಯದ 17 ಪ್ರಸ್ತಾವಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ

ಮೈಸೂರು–ಕುಶಾಲನಗರ ಹೆದ್ದಾರಿ ವಿಸ್ತರಣೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:40 IST
Last Updated 5 ಫೆಬ್ರುವರಿ 2026, 15:40 IST
   

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಜಲ ಜೀವನ್‌ ಮಿಷನ್ ಕಾಮಗಾರಿ, ವಿದ್ಯುತ್‌ ಮಾರ್ಗ ನಿರ್ಮಾಣ ಹಾಗೂ 4 ಜಿ ಮೊಬೈಲ್ ಟವರ್‌ಗಳ ಅಳವಡಿಸುವ ಕರ್ನಾಟಕದ 17 ಪ್ರಸ್ತಾವಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿದೆ. 

ಕೇಂದ್ರ ಅರಣ್ಯ ಸಚಿವ ಭೂಪೇಂದರ್‌ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿಯ 88ನೇ ಸಭೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಪ್ರಸ್ತಾವಗಳಿಗೆ ಷರತ್ತುಬದ್ಧ ಒಪ್ಪಿಗೆ ನೀಡಲಾಯಿತು. ರಾಜ್ಯದ ಇಷ್ಟೊಂದು ಪ‍್ರಸ್ತಾವಗಳಿಗೆ ಈಚಿನ ವರ್ಷಗಳಲ್ಲಿ ಅನುಮೋದನೆ ಸಿಕ್ಕಿದ್ದು ಇದೇ ಮೊದಲು. 

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ₹4,100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೈಸೂರು-ಕುಶಾಲನಗರ ಚತುಷ್ಪಥ/ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ 10 ಎಕರೆ ಜಾಗವನ್ನು ಬಳಸಿಕೊಳ್ಳಲು ಸ್ಥಾಯಿ ಸಮಿತಿ ಷರತ್ತುಬದ್ಧ ಅನುಮತಿ ಕೊಟ್ಟಿದೆ. 

ADVERTISEMENT

ಈಗಿರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇದು ಮೈಸೂರು ಮತ್ತು ಕೊಡಗು ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ರಸ್ತೆ ಸುರಕ್ಷತೆ ಹೆಚ್ಚಿಸಲು, ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ಸುಧಾರಣೆ ಅಗತ್ಯ. ರಂಗನತಿಟ್ಟು ಪಕ್ಷಿಧಾಮದ ಪರಿಸರ-ಸೂಕ್ಷ್ಮ ವಲಯದ ಅರಣ್ಯೇತರ ಭೂಮಿಯನ್ನಷ್ಟೇ ಬಳಸಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಪಿಸಿಸಿಎಫ್‌ (ವನ್ಯಜೀವಿ) ಅವರು ಸಭೆಯ ಗಮನಕ್ಕೆ ತಂದರು. 13 ಷರತ್ತುಗಳನ್ನು ವಿಧಿಸಿದ ಸ್ಥಾಯಿ ಸಮಿತಿಯು ಕಾಮಗಾರಿಗೆ ಹಸಿರು ನಿಶಾನೆ ತೋರಿತು. 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 400 ಕೆ.ವಿ. ವಿದ್ಯುತ್‌ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲು 11 ಎಕರೆ ಕಾಡು ಬಳಸುವ ಪ್ರಸ್ತಾವಕ್ಕೂ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿತು. 

ಯಾವೆಲ್ಲ ಕಾಮಗಾರಿಗಳಿಗೆ ಅನುಮತಿ: 

*ಜಲಜೀವನ್‌ ಮಿಷನ್‌ ಯೋಜನೆಗೆ ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ಹನೂರು ಉಪವಿಭಾಗದಲ್ಲಿ 0.08 ಹೆಕ್ಟೇರ್, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ 0.23 ಹೆಕ್ಟೇರ್‌, ಬಿಆರ್‌ಟಿಯ 0.48 ಹೆಕ್ಟೇರ್‌ ಹಾಗೂ 0.10 ಹೆಕ್ಟೇರ್ ಬಳಕೆಗೆ ಒಪ್ಪಿಗೆ. 

*ಶರಾವತಿ ಹಾಗೂ ಕಾಳಿ ವನ್ಯಜೀವಿ ಧಾಮದ ವ್ಯಾಪ್ತಿಗಳಲ್ಲಿ 10 ಕಡೆಗಳಲ್ಲಿ 4 ಜಿ ಮೊಬೈಲ್‌ ಟವರ್‌ ಅಳವಡಿಕೆಗೆ ಅನುಮತಿ. 

*ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹನೂರು ಉಪವಿಭಾಗದಲ್ಲಿ ಭೂಗತ ಕೇಬಲ್‌ ಬಳಸಿ 11 ಕೆ.ವಿ. ಎಚ್‌ಟಿ/ಎಲ್‌ಟಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.