ADVERTISEMENT

ಕಾಳಿಂಗ ಅಧ್ಯಯನಕ್ಕೆ ಅನುಮತಿ ಇಲ್ಲ: ಕೆಆರ್‌ಎಸ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:37 IST
Last Updated 29 ಅಕ್ಟೋಬರ್ 2025, 16:37 IST
<div class="paragraphs"><p>ಕಾಳಿಂಗ ಸರ್ಪ</p></div>

ಕಾಳಿಂಗ ಸರ್ಪ

   

ಬೆಂಗಳೂರು: ‘ಶಿವಮೊಗ್ಗ ಜಿಲ್ಲೆ ಆಗುಂಬೆಯ ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್‌ಗೆ ಕಾಳಿಂಗ ಸರ್ಪದ ಸಂಶೋಧನೆ ಈಗ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲ. ಈ ಕುರಿತು ಅವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂಸ್ವಾಮಿ ಆರೋಪಿಸಿದ್ದಾರೆ.

‘ಕಾಳಿಂಗ ಸರ್ಪಗಳ ಸಂಶೋಧನೆಗೆ ಸರ್ಕಾರ ನೀಡಿದ್ದ ಅನುಮತಿ 2017ರ ಆಗಸ್ಟ್‌ ಅಂತ್ಯಕ್ಕೆ ಮುಗಿದಿದೆ. ಆ ಬಳಿಕ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಒಂದು ವೇಳೆ ಸರ್ಕಾರ ಅನುಮತಿ ನೀಡಿದ್ದರೆ, ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸರ್ಕಾರದ ಅನುಮತಿ ಇಲ್ಲದೇ ಇದ್ದರೂ ಸಂಶೋಧನೆ ಹೆಸರಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಪರಿಚ್ಛೇದ–1 ರ ಅಡಿ ಬರುವ ಕಾಳಿಂಗ ಸರ್ಪಗಳನ್ನು ಅನಧಿಕೃತವಾಗಿ ಹಿಡಿಯುವುದು, ಫೋಟೊ, ವಿಡಿಯೊ, ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಮುಖ್ಯ ವನ್ಯಜೀವಿ ವಾರ್ಡನ್‌ರಿಂದ ಕೂಡಾ ಕಾಳಿಂಗ ಸರ್ಪ ಪಾರುಗಾಣಿಕೆಗೆ ಅನುಮತಿ ಸಿಕ್ಕಿಲ್ಲ. ಆದರೂ ವೈಯಕ್ತಿಕ ವರ್ಚಸ್ಸಿಗಾಗಿ ಮುಗ್ದಜೀವಿಗೆ ಹಿಂಸೆ ನೀಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಈ ಹಿಂದೆ ಮಲೆನಾಡಿನಲ್ಲಿ ಕಾಳಿಂಗ ಸರ್ಪ ಕಣ್ಣಿಗೆ ಕಾಣಿಸುವುದೇ ಅಪರೂಪವಾಗಿತ್ತು. ಆದರೆ, ಈಗ ಗದ್ದೆ, ತೋಟ, ಹಾಡಿ, ಹೆದ್ದಾರಿ ಬದಿಗಳಲ್ಲೂ ಕಂಡು ಬರುತ್ತಿವೆ. ಆಗಾಗ ಮನೆಯೊಳಗೆ, ಕೊಟ್ಟಿಗೆಗೆ ಬರುವುದೂ ಇದೆ. ಆದರೆ ಸಂಶೋಧನಾ ಕೇಂದ್ರಗಳ ಕಾರ್ಯಾಚರಣೆ ವ್ಯಾಪ್ತಿಯ ಪ್ರದೇಶದಲ್ಲೇ ಈ ಸಮಸ್ಯೆ ತೀವ್ರ ರೀತಿಯಲ್ಲಿ ಕಂಡು ಬರುತ್ತಿದೆ. ಹಿಂದೆ ಇಲ್ಲದ ಸಮಸ್ಯೆಯನ್ನು ಈಗ ಸೃಷ್ಟಿಸಿದವರು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಕಾಳಿಂಗ ಸರ್ಪದ ಆಹಾರವಾಗಿರುವ ನಾಗರಹಾವು, ಕೇರೆ ಹಾವುಗಳನ್ನು ಈಗ ಮಲೆನಾಡಿನಲ್ಲಿ ಕಾಣುವುದೇ ಅಪರೂಪವಾಗಿದೆ. ಅದಕ್ಕೆ ಬದಲು ಕಾಳಿಂಗಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಸಂಶೋಧನೆ ಪರಿಸರ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದೆಯೇ’ ಎಂದು ಜ್ಞಾನ ಸಿಂಧೂಸ್ವಾಮಿ ಪ್ರಶ್ನಿಸಿದ್ದಾರೆ.

‘ಸ್ನೇಕ್ ಇಕಾಲಜಿ, ಹೆರ್ಪ್‌ ಟೂರ್‌, ನೈಟ್‌ ಟ್ರೈಲ್, ಸ್ಟ್ರೀಮ್ ವಾಕ್‌, ಸ್ಟಾರ್ಮ್‌, ಕಿಂಗ್ ಕೋಬ್ರಾ ಬಯೊನಾಮಿಕ್ಸ್‌ ಅಂಡ್‌ ಕನ್ಸವರ್ಷೇಷನ್‌ ಹೆಸರಿನಲ್ಲಿ ಅನಧಿಕೃತವಾಗಿ ಸೋಮೇಶ್ವರ ವನ್ಯಜೀವಿಧಾಮದೊಳಗೆ ಪ್ರವೇಶಿಸಲಾಗುತ್ತಿದೆ. ವನ್ಯಜೀವಿಗಳ ಮೇಲೆ ಹಿಂಸೆ ನಡೆಯುತ್ತಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಅರಣ್ಯ ಕಾಯ್ದೆ -1980, ಪರಿಸರ ಸಂರಕ್ಷಣಾ ಕಾಯ್ದೆ -1986ರ ಉಲ್ಲಂಘನೆ. ಇವೆಲ್ಲ ವಿಷಯಗಳ ಕುರಿತು ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.