
ಬೆಂಗಳೂರು: ಶರಾವತಿ ಸಿಂಗಳೀಕ ವನ್ಯಜೀವಿಧಾಮ, ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದ ಯೋಜನೆಗಳಿಗೆ ಬುಧವಾರ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆ ಷರತ್ತುಬದ್ಧ ಒಪ್ಪಿಗೆ ನೀಡಿದೆ.
ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಬೇಕು ಎಂಬ ಕರಾರು ವಿಧಿಸಿ ಸಭೆ ಅನುಮೋದನೆ ನೀಡಿತು. ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಸ್ಥಾಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಸಿಂಗಳೀಕ ವನ್ಯಜೀವಿಧಾಮದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಿರೇಬೈಲ್ ಗ್ರಾಮದ ಅಂದಬಳ್ಳಿ ಮತ್ತು ಇತರ 5 ಗ್ರಾಮಗಳ 325 ಮನೆಗಳಿಗೆ, ಹೊನ್ನಾವರ ಪಟ್ಟಣ ಮತ್ತು ಮಾರ್ಗದಲ್ಲಿರುವ 9 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆಗೆ 0.976 ಹೆಕ್ಟೇರ್ ಅರಣ್ಯ ಪ್ರದೇಶವನ್ನು ನೀಡುವ ಯೋಜನೆಗೆ ಅನುಮೋದನೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಕಳುಹಿಸಲು ಸಭೆ ತೀರ್ಮಾನಿಸಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 291 ಜನವಸತಿ ಪ್ರದೇಶಗಳಿಗೆ (ಯೋಜನೆ ಹಂತ–2 ರಲ್ಲಿ 193 ಜನವಸತಿ ಪ್ರದೇಶಗಳಿಗೆ) ಕುಡಿಯುವ ನೀರಿನ ಸಂಪರ್ಕ ನೀಡುವ ಪ್ರಸ್ತಾವದ ಬಗ್ಗೆ ಚರ್ಚಿಸಿದ ಮಂಡಳಿ, ಇದಕ್ಕಾಗಿ 4.4 ಹೆಕ್ಟೇರ್ ಅರಣ್ಯ ಭೂಮಿ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ಅತ್ತಿವೇರಿ ಪಕ್ಷಿಧಾಮ, ಶರಾವತಿ ಸಿಂಗಳೀಕ ವನ್ಯಜೀವಿಧಾಮ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ಸಂವಹನ ಕಂಬಗಳನ್ನು ಅಳವಡಿಸುವ ಕುರಿತಾದ ಬಿಎಸ್‌ಎನ್‌ಎಲ್ ಪ್ರಸ್ತಾವವನ್ನು ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂವಹನ ಕಂಬಗಳಿಂದ ಪರಿಸರಕ್ಕೆ, ಪಶುಪಕ್ಷಿಗಳಿಗೆ ಆಗುವ ತೊಂದರೆ ಕುರಿತು ವಿವರ ಮಂಡಿಸಲು ಸೂಚಿಸಲಾಯಿತು.
ಪಶ್ಚಿಮಘಟ್ಟದಲ್ಲಿ ಕಾರ್ಯಗತವಾಗಿರುವ ರಸ್ತೆ ಮತ್ತಿತರ ಅಭಿವೃದ್ಧಿ ಯೋಜನೆಗಳಲ್ಲಿ ಷರತ್ತುಗಳ ಪಾಲನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಾಮರ್ಶೆ ನಡೆಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.
ಅರಣ್ಯ ಮತ್ತು ವನ್ಯಜೀವಿಧಾಮಗಳಲ್ಲಿ ಯಾವುದೇ ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆ ಆಗದಂತೆ ಅಪಾಯ ತಗ್ಗಿಸುವ ಪರಿಹಾರಗಳೊಂದಿಗೆ ಪ್ರಸ್ತಾವನೆ ಮಂಡಿಸುವುದನ್ನು ಕಡ್ಡಾಯಗೊಳಿಸುವಂತೆ ಅವರು ನಿರ್ದೇಶನ ನೀಡಿದರು.
‘ರೇಡಿಯೊ ಕಾಲರ್ ಹಾಕಿ ಕಾಡಿಗೆ ಬಿಡಿ’
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕೆರೆಕಟ್ಟೆ ಸಮೀಪ ಸೆರೆ ಹಿಡಿಯಲಾಗಿರುವ ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗೆ ಬಿಡುವುದು ಸೂಕ್ತ ಎಂದು ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಸೂಚಿಸಿದರು. ಇತ್ತೀಚೆಗೆ ಇಬ್ಬರ ಸಾವಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿಯಲಾಗಿದ್ದು ಆನೆ ಈಗ ಶಿಬಿರದಲ್ಲಿದೆ. ಆನೆಯ ಸ್ವಭಾವದ ಪರಾಮರ್ಶೆ ನಡೆಸಿ ಉನ್ನತಾಧಿಕಾರಿಗಳು ಮತ್ತು ತಜ್ಞರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಅವರು ಸೂಚಿಸಿದರು.
ಸಭೆಗೆ ಅನಿಲ್ ಕುಂಬ್ಳೆ ಕರೆಯಲು ಸೂಚನೆ
ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರನ್ನು ಮುಂದಿನ ಸಭೆಗಳಿಗೆ ಆಹ್ವಾನಿಸುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಖಂಡ್ರೆ ಸೂಚನೆ ನೀಡಿದರು.