ADVERTISEMENT

ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲಗೆ ಬಿಜೆಪಿ ಗಾಳ?

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 11:29 IST
Last Updated 10 ಅಕ್ಟೋಬರ್ 2020, 11:29 IST
ಎಂ.ಬಿ.ಪಾಟೀಲ್‌
ಎಂ.ಬಿ.ಪಾಟೀಲ್‌   

ವಿಜಯಪುರ: ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ನಾಯಕ, ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌‌ ಶಾಸಕ ಎಂ.ಬಿ.ಪಾಟೀಲ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ ಅವರು ಲಿಂಗಾಯತ ಸಮಾಜದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವುದರಿಂದ ಅವರಿಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗುತ್ತಿದೆ. ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಭಾವಿ ಲಿಂಗಾಯತ ನಾಯಕರ ಕೊರತೆ ಇರುವುದರಿಂದ ಪಾಟೀಲ ಅವರತ್ತ ಬಿಜೆಪಿ ಹೈಕಮಾಂಡ್‌ ಒಲವು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ಎಂ.ಬಿ.ಪಾಟೀಲ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಆಮಿಷವನ್ನು ಹೈಕಮಾಂಡ್‌ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಎಂ.ಬಿ.ಪಾಟೀಲ ಒಲವು ತೋರಿಲ್ಲ ಎಂದು ತಿಳಿದುಬಂದಿದೆ.

ADVERTISEMENT

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಎಂ.ಬಿ.ಪಾಟೀಲ, ‘ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಆಧಾರ ರಹಿತ, ಸತ್ಯಕ್ಕೆ ದೂರವಾದದ್ದು’ ಎಂದಷ್ಟೇ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.