ADVERTISEMENT

ಹೊಸಕೋಟೆ ಉಪಚುನಾವಣೆ| ಬಿಜೆಪಿ ಟಿಕೆಟ್‌ ಸಿಗದಿದ್ದರೆ ಸ್ವತಂತ್ರ ಸ್ಪ‍ರ್ಧೆ: ಶರತ್‌

ಸ್ವಾಭಿಮಾನಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:40 IST
Last Updated 1 ಡಿಸೆಂಬರ್ 2019, 13:40 IST
   

ಹೊಸಕೋಟೆ: ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ಇಲ್ಲಿನ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಬರುವ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲು ಈ ಸಮಾವೇಶ ತಾಲ್ಲೂಕಿನ ಮೂರು ಕಡೆ ಹಮ್ಮಿಕೊಳ್ಳಲಾಗಿತ್ತು. ಗುರುವಾರ ನಡೆದ ಎರಡು ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಪಾಲ್ಗೊಂಡಿದ್ದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಶರತ್ ಬಚ್ಚೇಗೌಡ, ‘ಅಧಿಕಾರಕ್ಕಾಗಿ ಆಸೆಪಟ್ಟು ರಾಜಕೀಯಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ನಮ್ಮ ಕುಟುಂಬ ಕಳೆದ ಮೂರು ತಲೆಮಾರುನಿಂದಲೂ ಜನರಿಗಾಗಿ ರಾಜಕೀಯ ಕ್ಷೇತ್ರದಲ್ಲಿದೆ. ನಾನು ಇದನ್ನೇ ಮಾಡುತ್ತಿದ್ದೇನೆ. ತಾಲ್ಲೂಕಿನಲ್ಲಿ ಪಕ್ಷಕ್ಕೆ ಶಕ್ತಿ ಕಡಿಮೆ ಇದ್ದಾಗ ಬಲ ತುಂಬಿದ್ದೇನೆ. ಕಳೆದ ಚುನಾವಣೆಯಲ್ಲಿ 98,000 ಮತ ಪಡೆದಿದ್ದೇನೆ. ಹೊರಗಿನಿಂದ ಬಂದವರಿಗೆ ಪಕ್ಷದಲ್ಲಿಸ್ಥಾನಮಾನ ನೀಡದೆ ನನಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಈನಿಟ್ಟಿನಲ್ಲಿ ಪಕ್ಷದ ವರಿಷ್ಠರು ತೀರ್ಮಾನಿಸಲಿ. ಇಲ್ಲದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ’ ಎಂದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಬೈರೇಗೌಡ ಮಾತನಾಡಿ, ‘ಎಂಟಿಬಿ ನಾಗರಾಜ್ ಶಾಸಕರಾದ ಮೇಲೆ ತಾಲ್ಲೂಕಿನಲ್ಲಿ ಸಣ್ಣಪುಟ್ಟ ರಸ್ತೆಗಳಿಗೆ ಕಾಂಕ್ರೀಟ್ ಹಾಕಿಸಿದ್ದು ಬಿಟ್ಟರೆ ಯಾವುದೇ ದೊಡ್ಡಮಟ್ಟದ ಅಭಿವೃದ್ಧಿ ಆಗಿಲ್ಲ. ಕೇವಲ ಜಾತಿ ಹಾಗೂ ದ್ವೇಷದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ’ ಎಂದು ದೂರಿದರು.

ADVERTISEMENT

‘ತಾವೇ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿದವರು ಎಂದು ಎಂಟಿಬಿ ನಾಗರಾಜ್‌ ಹೇಳುತ್ತಿದ್ದಾರೆ. ಅವರಿಗಿಂತಲೂ ಮುಂಚೆ ಹಿರಿಯ ಮುಖಂಡ ಚಿಕ್ಕೇಗೌಡರ ಅವರ ಕೊಡುಗೆ ಕಾಂಗ್ರೆಸ್‌ಗೆ ಏನು ಇಲ್ಲವೇ ಎಂದು ಪ್ರಶ್ನಿಸಿದರು.

ತಮ್ಮ ಹೋರಾಟ ಬಿಜೆಪಿಯ ವಿರುದ್ಧ ಅಲ್ಲ. ನಾವೂ ಈಗಲೂ ಬಿಜೆಪಿ ಬಿಟ್ಟಿಲ್ಲ. ನಮ್ಮ ಹೋರಾಟ ಎಂ.ಟಿ.ಬಿ ನಾಗರಾಜ್ ವಿರುದ್ಧ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಹುಲ್ಲೂರು ಮಂಜುನಾಥ್, ಮುಖಂಡರಾದ ಮುನಿಯಪ್ಪ, ಬಿ.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಕೃಷ್ಣಮೂರ್ತಿ, ತಾಲ್ಲೂಕು ಉಪಾಧ್ಯಕ್ಷರಾದ ಸುಬ್ಬರಾಜು, ಇಂತಿಯಾಜ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.