ADVERTISEMENT

ಐದು ವರ್ಷಗಳಲ್ಲಿ ಕೋಟಿ ಉದ್ಯೋಗ ಸೃಷ್ಟಿ: ಅಶ್ವತ್ಥನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:17 IST
Last Updated 13 ಜನವರಿ 2021, 3:17 IST
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆಯಲ್ಲಿ ಯುವ ಸಾಧಕರಾದ ಚೈತನ್ಯ ರಾಮೇಗೌಡ, ವಸಂತ ಕಾಮತ್‌ ಮತ್ತು ಅಪ್ರಮೇಯ ರಾಧಾಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯ್ಕ್, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದ್ದರು– ಪ್ರಜಾವಾಣಿ ಚಿತ್ರ
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆಯಲ್ಲಿ ಯುವ ಸಾಧಕರಾದ ಚೈತನ್ಯ ರಾಮೇಗೌಡ, ವಸಂತ ಕಾಮತ್‌ ಮತ್ತು ಅಪ್ರಮೇಯ ರಾಧಾಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯ್ಕ್, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವುದರ ಜತೆಯಲ್ಲೇ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಉದ್ಯೋಗದ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಗುಣಮಟ್ಟವನ್ನೂ ಹೆಚ್ಚಿಸಲಾಗುವುದು’ ಎಂದರು.

ಯುವಜನರು ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಬೇಕಾದ ಸ್ಥಿತಿ ಈಗ ಇದೆ. ಅದಕ್ಕೆ ಪೂರಕವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಹೊಣೆಗಾರಿಕೆ ಹೆಚ್ಚಿಸುವ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಐದು ವರ್ಷಗಳಲ್ಲಿ 15 ಲಕ್ಷ ಯುವಕ, ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು: ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ವಿವೇಕಾನಂದರ ಆಶಯಕ್ಕೆ ಅನುಗುಣವಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು. ಯುವಜನರನ್ನು ರಾಷ್ಟ್ರ ನಿರ್ಮಾಣ ಮತ್ತು ರಚನಾತ್ಮಕ ಕೆಲಸದಲ್ಲಿ ತೊಡಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ 12 ಮಂದಿ ಯುವ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಒಂದು ಕೋಟಿ ಉದ್ಯೋಗ ಸೃಷ್ಟಿಗೆ ಇರುವ ಅವಕಾಶಗಳು-ಸವಾಲುಗಳು ಕುರಿತ ಚರ್ಚಾಗೋಷ್ಠಿ 1 ಬ್ರಿಡ್ಜ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಮದನ್‌ ಪದಕಿ, ಕೃಷಿಕಲ್ಪ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂ.ಪಾಟೀಲ, ಬೆಂಗಳೂರಿನ ವೋಲ್ವೋ ಕಂಪನಿ ‌ಸಿಇಒ ಕಮಲ್‌ ಬಾಲಿ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ವಿನಯ್‌ ಲೂತ್ರ, ಇಂಡಿ ವಿಲೇಜ್‌ ಸಿಇಓ ಸ್ಮಿತಾ ಮಾಲಿಪಾಟೀಲ್‌, ವಯತಿ ವೇವ್ಸ್‌ ಸಿಇಓ ದೇವಿಕಾ ಕೃಷ್ಣನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.