ADVERTISEMENT

ಪಕ್ಷದ ವೇದಿಕೆಯಲ್ಲಷ್ಟೇ ಚರ್ಚೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 20:32 IST
Last Updated 29 ಜೂನ್ 2021, 20:32 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಪಕ್ಷಕ್ಕೆ ಸಂಬಂಧಿಸಿದಂತೆ ಸದ್ಯ ಯಾವುದೇ ಗೊಂದಲಗಳೂ ಇಲ್ಲ. ಯಾವುದೇ ವಿಚಾರ ಇದ್ದರೂ ಪಕ್ಷದ ವೇದಿಕೆಯಲ್ಲಷ್ಟೇ ಚರ್ಚಿಸುವೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಜಗಳವಿಲ್ಲ. ಎಲ್ಲವನ್ನೂ ಮಾಧ್ಯಮದವರೇ ಸೃಷ್ಟಿ ಮಾಡುತ್ತಿದ್ದೀರಿ. ಏನೇ ಇದ್ದರೂ ನಿಮಗೆ ಹೇಳಲು ಆಗುವುದಿಲ್ಲ. ಯಾವುದೇ ವಿಚಾರಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಿ ಹೇಳಬೇಕೋ ಅಲ್ಲಿ ಮಾತ್ರ ಹೇಳುವೆ’ ಎಂದರು.

ಕಾಂಗ್ರೆಸ್‌ನಲ್ಲಿ ಸಮನ್ವಯ ಇಲ್ಲ ಎಂದು ಹೇಳಿದವರು ಯಾರು? ಸಮನ್ವಯ ಸಮಿತಿ ರಚಿಸಿದರೆ ಪಕ್ಷದ ವರಿಷ್ಠರು ಮಾಧ್ಯಮಗಳಿಗೆ ಮಾಹಿತಿ ಕೊಡುತ್ತಾರೆ. ಹೈಕಮಾಂಡ್‌ ಭೇಟಿಗೆ ಕೆಲವು ನಾಯಕರು ದೆಹಲಿಗೆ ತೆರಳಿದ್ದಾರೆ ಎಂಬುದರ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ತಾವು ದೆಹಲಿಗೆ ತೆರಳುವುದಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ADVERTISEMENT

ಕೆಪಿಸಿಸಿ ಪದಾಧಿಕಾರಿಗಳ ನೇಮಕ ಬಾಕಿ ಇತ್ತು. ಪದಾಧಿಕಾರಿಗಳ ಕೆಲಸವನ್ನು ಕಾರ್ಯಾಧ್ಯಕ್ಷರೇ ಮಾಡುತ್ತಿದ್ದು, ಈಗ ಆ ನೇಮಕಕ್ಕೆ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾಂತ್ವನ ಹೇಳಲು ಪ್ರವಾಸ: ‘ಕೋವಿಡ್‌ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿನೀಡಿ ಸಾಂತ್ವನ ಹೇಳುವಂತೆ ಎಐಸಿಸಿ ಸೂಚನೆ ನೀಡಿದೆ. ಅದರಂತೆ ತಿಂಗಳಿಡೀ ಸಾಂತ್ವನ ಹೇಳುವ ಕೆಲಸ ಮಾಡಲಾಗುವುದು. ಕೋವಿಡ್‌ನಿಂದ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಲಾಗುವುದು’ ಎಂದರು.

ಸೆಪ್ಟೆಂಬರ್‌ನಲ್ಲಿ ಕೋವಿಡ್‌ ಮೂರನೇ ಅಲೆ ಬರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದನ್ನು ಎದುರಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.