ADVERTISEMENT

ಬಿಜೆಪಿ ಸೇರ್ಪಡೆ ಖಚಿತ: ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಹೇಳಿಕೆ ವೈರಲ್

ನಂತರ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದ ಶಾಸಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 11:43 IST
Last Updated 13 ಜನವರಿ 2019, 11:43 IST
ಗಣೇಶ ಹುಕ್ಕೇರಿ
ಗಣೇಶ ಹುಕ್ಕೇರಿ    

ಬೆಳಗಾವಿ: ‘ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಜ. 19ರಂದು ಬಿಜೆಪಿ ಸೇರುವುದು ಶೇ 100ರಷ್ಟು ಖಚಿತ. ನನ್ನೊಂದಿಗೆ ಯಾರಾರು ಬರುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಬರುವುದಿಲ್ಲ. ನಾನಂತೂ ಹೋಗುತ್ತಿದ್ದೇನೆ’ ಎಂದು ಚಿಕ್ಕೋಡಿ ಕ್ಷೇತ್ರದ ಶಾಸಕ, ಮುಖ್ಯಸಚೇತಕ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಈಚೆಗೆ ಹೇಳಿರುವ ಮೊಬೈಲ್‌ ಸಂಭಾಷಣೆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟಿವಿ ವಾಹಿನಿಯ ಪ್ರತಿನಿಧಿಯೊಂದಿಗೆ ನಡೆದಿರುವ ಸಂಭಾಷಣೆ ಆ ಆಡಿಯೊದಲ್ಲಿದೆ. ಇದನ್ನು ದೃಶ್ಯಮಾಧ್ಯಮಗಳು ಭಾನುವಾರ ಪ್ರಸಾರ ಮಾಡಿವೆ. ನಂತರ ಸ್ಪಷ್ಟನೆ ನೀಡಿರುವ ಗಣೇಶ, ‘ಬಿಜೆಪಿ ಸೇರುತ್ತೇನೆ ಎಂದು ತಮಾಷೆಗೆ ಹೇಳಿದ್ದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಕಾಂಗ್ರೆಸ್‌ ನನಗೆ ತವರಿದ್ದಂತೆ. ನಾನೇಕೆ ನನ್ನ ಮನೆ ತೊರೆಯಲಿ. ಬಿಜೆಪಿ (ಭಾರತೀಯ ಜುಮ್ಲಾ ಪಾರ್ಟಿ) ಸೇರಲಿ?’ ಎಂದು ಟ್ವಿಟರ್‌ನಲ್ಲೂ ಬರೆದುಕೊಂಡಿದ್ದಾರೆ.

ADVERTISEMENT

ಚಿಕ್ಕೋಡಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕುರಿತು ನಿನ್ನೆಯಷ್ಟೇ ನಮ್ಮ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಟಿವಿಯೊಂದರ ಚಿಕ್ಕೋಡಿ ಪ್ರತಿನಿಧಿ ನನ್ನನ್ನು ಪ್ರಶ್ನಿಸಿದ್ದರು. ನಾನು ಬಿಜೆಪಿ ಸೇರುತ್ತೇನೆ ಎಂದು ತಮಾಷೆಗಾಗಿ ಹೇಳಿದ್ದೆ. ಕಾಂಗ್ರೆಸ್‌ನೊಂದಿಗೆ ನಾಲ್ಕು ದಶಕಗಳಿಂದಲೂ ನಮ್ಮ ಕುಟುಂಬದ ನಂಟು ಇವೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯುವುದಿಲ್ಲ. ಪಕ್ಷ ನನ್ನ ಎಲ್ಲ ರೀತಿಯ ಸ್ಥಾನಮಾನ, ಅಧಿಕಾರ ಹಾಗೂ ಗೌರವ ನೀಡಿದೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು’ ಎಂದು ಸ್ಪಷ್ಟನೆ ನೀಡಿದರು.‌

ಅವರ ತಂದೆ, ಚಿಕ್ಕೋಡಿ ಕ್ಷೇತ್ರದ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ‘ನಾನು–ನನ್ನ ಮಗ ಕಾಂಗ್ರೆಸ್‌ನಲ್ಲೇ ಇದ್ದೀವಿ. ಬಿಜೆಪಿಗೆ ಹೋಗುವುದಿಲ್ಲ. ಹೋದ ಮೇಲೆ ಬೇಕಿದ್ದರೆ ಸುದ್ದಿ ಮಾಡಿ. ಹೋಗಿಲ್ಲ; ಏನಿಲ್ಲ, ಈಗಲೇ ಈಗಾಗಲೇ ಟಿವಿಯವರು ಸುದ್ದಿ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ, ‘ಅವರು ಪರಿಚಯದ ವರದದಿಗಾರದೊಂದಿಗೆ ಚೇಷ್ಟೆ ಮಾಡುವುದಕ್ಕಾಗಿ ಆ ರೀತಿ ಹೇಳಿಕೆ ನೀಡಿರಬಹುದು. ಅವರಿಗೆ ಪಕ್ಷದಲ್ಲಿ ಎಲ್ಲ ರೀತಿಯ ಸ್ಥಾನಮಾನ ನೀಡಲಾಗಿದೆ. ಅವರಿಗೆ ಅಸಮಾಧಾನ ಇಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿದ್ದಾರೆ. ಹೀಗಾಗಿ, ಪಕ್ಷ ಬಿಡುವುದಿಲ್ಲ. ಸರ್ಕಾರ ಭದ್ರವಾಗಿದೆ. ರಾಜಕಾರಣದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸಹಜ’ ಎಂದರು.

‘ಕೆಲವರು ವೈಯಕ್ತಿಕ ಕೆಲಸಗಳಿಗಾಗಿ ನವದೆಹಲಿಗೆ ಹೋಗುತ್ತಾರೆ. ಹಾಗೆಂದ ಮಾತ್ರಕ್ಕೆ ಬಿಜೆಪಿ ಸೇರ್ಪಡೆಗೆ ಹೋಗಿದ್ದಾರೆ ಎನ್ನುವುದು ಸರಿಯಲ್ಲ. ಆರು ತಿಂಗಳಿಂದಲೂ ಕೇವಲ ಊಹಾಪೋಹಗಳು ಕೇಳಿಬರುತ್ತಿವೆ. ಸರ್ಕಾರ ಸುಭದ್ರವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.