ADVERTISEMENT

ರೈತರಿಗೆ ನೆರವಾಗಲು ಸಮಗ್ರ ಕೃಷಿ ನೀತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 15:10 IST
Last Updated 5 ಸೆಪ್ಟೆಂಬರ್ 2021, 15:10 IST
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ನಡೆದ ‘ಮುಖ್ಯಮಂತ್ರಿಯವರ ರೈತ ವಿದ್ಯಾ ನಿಧಿ’ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನ ಸ್ವೀಕರಿಸಿದ ವಿದ್ಯಾರ್ಥಿಗಳಾದ ವಿನಾಯಕ್‌, ಸುರೇಂದ್ರ ಗೌಡ, ಅಕ್ಷತಾ ಮತ್ತು ರಕ್ಷಿತಾ ಚೆಕ್‌ ಪ್ರದರ್ಶಿಸಿ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ನಡೆದ ‘ಮುಖ್ಯಮಂತ್ರಿಯವರ ರೈತ ವಿದ್ಯಾ ನಿಧಿ’ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನ ಸ್ವೀಕರಿಸಿದ ವಿದ್ಯಾರ್ಥಿಗಳಾದ ವಿನಾಯಕ್‌, ಸುರೇಂದ್ರ ಗೌಡ, ಅಕ್ಷತಾ ಮತ್ತು ರಕ್ಷಿತಾ ಚೆಕ್‌ ಪ್ರದರ್ಶಿಸಿ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ರೈತರ ಶ್ರಮಕ್ಕೆ ಸಂಪೂರ್ಣ ಬೆಲೆ ದೊರಕಿಸುವಂತಹ ಸಮಗ್ರ ಕೃಷಿ ನೀತಿಯನ್ನು ರೂಪಿಸಲಾಗುವುದು. ರೈತ ಕುಟುಂಬಗಳ ಅಭಿವೃದ್ಧಿಗೆ ನೆರವಾಗುವಂತೆ ಬೆಳೆಗಳ ಕೊಯ್ಲಿನೋತ್ತರ ನಿರ್ವಹಣೆಗೆ ಕೃಷಿ ನೀತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ನಡೆದ ‘ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹ, ಸಂಸ್ಕರಣೆ, ಸಾಗಾಣಿಕೆ ಮತ್ತು ಮಾರುಕಟ್ಟೆ ಸೌಲಭ್ಯ ದೊರಕಿಸುವುದಕ್ಕೆ ಸರ್ಕಾರ ಆದ್ಯತೆ ನೀಡಲಿದೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪ್ರಯತ್ನಗಳು ಆರಂಭವಾಗಿವೆ. ಅದಕ್ಕೆ ಪೂರಕವಾಗಿ, ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಅಧ್ಯಯನ ಕೇಂದ್ರಗಳ ಆವರಣದಿಂದ ಹೊರ ಬಂದು, ರೈತರ ಜಮೀನುಗಳಲ್ಲಿ ಹೊಸ ಸಂಶೋಧನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ADVERTISEMENT

ರೈತರ ಮಕ್ಕಳು ಎಸ್‌ಎಸ್‌ಎಲ್‌ಸಿ ನಂತರ ಶಿಕ್ಷಣ ಮುಂದುವರಿಸುವುದು ಕಡಿಮೆಯಾಗುತ್ತಿದೆ. ಬಹುತೇಕರು ಆರ್ಥಿಕ ಸಂಕಷ್ಟದ ಕಾರಣ ನೀಡಿ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಅನೇಕ ಬಾರಿ ಹಳ್ಳಿಗಳಿಗೆ ಭೇಟಿ ನೀಡಿದ್ದಾಗ ಈ ವಿಷಯ ತಮ್ಮ ಗಮನಕ್ಕೆ ಬಂದಿತ್ತು. ರೈತರ ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಅವರ ಕುಟುಂಬಗಳ ಸ್ಥಿತಿ ಸುಧಾರಿಸಲು ಸಾಧ್ಯವಿದೆ. ಅದಕ್ಕೆ ಪೂರಕವಾಗಿ ‘ರೈತ ವಿದ್ಯಾ ನಿಧಿ’ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಅನುಕರಣೆಗೆ ಸಲಹೆ: ವಿದ್ಯಾನಿಧಿ ವರ್ಗಾವಣೆಗೆ ಚಾಲನೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾತನಾಡಿ, ‘ಕೃಷಿ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಡಿಜಿಟಲೀಕರಣದಲ್ಲಿ ಕರ್ನಾಟಕವು ದೇಶದಲ್ಲೇ ಮಾದರಿಯಾಗಿದೆ. ಸೋಮವಾರ ಮತ್ತು ಮಂಗಳವಾರ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರ ಜತೆ ಸಭೆ ನಡೆಸಲಾಗುವುದು. ಕರ್ನಾಟಕದ ಅತ್ಯುತ್ತಮ ಮಾದರಿಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗುವುದು’ ಎಂದರು.

ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್‌ ವಿತರಿಸಿ ಮಾತನಾಡಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ‘ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ವಾಣಿಜ್ಯ ಸ್ವರೂಪ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದು ಸಣ್ಣ ಹಿಡುವಳಿದಾರರಿಗೆ ಶಕ್ತಿ ತುಂಬಲಿದೆ’ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಸಚಿವ ಮುನಿರತ್ನ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಮುನಿಸ್ವಾಮಿ, ಡಾ. ಉಮೇಶ್ ಜಾಧವ್, ಈರಣ್ಣ ಕಡಾಡಿ, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಉಪಸ್ಥಿತರಿದ್ದರು.

‘ಯಡಿಯೂರಪ್ಪ ಮಾರ್ಗದರ್ಶಕ’

‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನು ಜರಿಗೊಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸರ್ಕಾರದ ಮಾರ್ಗದರ್ಶಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾಷಣದ ಮಧ್ಯದಲ್ಲಿ ಹಿಂದಿನ ಮುಖ್ಯಮಂತ್ರಿಯವ ಹೆಸರು ಪ್ರಸ್ತಾಪಿಸಿದ ಅವರು, ‘ಯಡಿಯೂರಪ್ಪ ರೈತ ನಾಯಕರಾಗಿ ಯಾವ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದ್ದರೋ, ಮುಖ್ಯಮಂತ್ರಿಯಾಗಿ ಅವುಗಳನ್ನು ಪರಿಹರಿಸಿದರು. ಪ್ರಧಾನಿಯವರ ನಾಯಕತ್ವದಲ್ಲಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಾನೂ ರೈತರ ಹಿತಕ್ಕಾಗಿ ಕೆಲಸ ಮಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.