ADVERTISEMENT

ಜೋಶಿ, ಸಿ.ಟಿ. ರವಿಯತ್ತ ಶುಭಾಶಯಗಳ ಮಹಾಪೂರ

ಬಿಜೆಪಿ ವಲಯದಲ್ಲಿ ರಾಜ್ಯ ರಾಜಕೀಯದ್ದೇ ಚರ್ಚೆ

ಸಿದ್ದಯ್ಯ ಹಿರೇಮಠ
Published 22 ಜುಲೈ 2021, 18:50 IST
Last Updated 22 ಜುಲೈ 2021, 18:50 IST
   

ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆ ದಟ್ಟವಾಗುತ್ತಿದ್ದಂತೆಯೇ ರಾಜಧಾನಿಯಲ್ಲಿನ ಬಿಜೆಪಿ ಪಾಳಯದಲ್ಲಿ ಹಾಗೂ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ಗುರುವಾರವಿಡೀ ರಾಜ್ಯ ರಾಜಕೀಯ ಬೆಳವಣಿಗೆಯ ಚರ್ಚೆ ನಡೆಯಿತು.

ಬದಲಾಗಲಿರುವ ಸನ್ನಿವೇಶದಲ್ಲಿ ಮಂತ್ರಿಗಿರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಹೊಂದಿರುವ ರಾಜ್ಯದ ಕೆಲವರು ದೆಹಲಿಗೆ ದೌಡಾಯಿಸಿ, ವರಿಷ್ಠರನ್ನು ಗುಪ್ತವಾಗಿ ಭೇಟಿ ಮಾಡಿದ್ದು, ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಕಾರಣರಾದರು.

‘ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು?’ ಎಂಬ ಚರ್ಚೆಯಲ್ಲಿ ರಾಜ್ಯವೂ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿಯ ಸಂಸದರು ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ತೊಡಗಿದ್ದರು. ವರಿಷ್ಠರು ‘ಅಚ್ಚರಿಯ ಅಭ್ಯರ್ಥಿ’ಯನ್ನೇ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳೇ ಕೇಳಿ ಬಂದವು ಎಂದು ಸಂಸದರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅತ್ತ ಸಂಸತ್‌ನಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್‌ ಜೋಶಿ ಅವರತ್ತ ಮಧ್ಯಾಹ್ನದಿಂದಲೇ ಸಹೋದ್ಯೋಗಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು. ಕೇಂದ್ರದ ಅನೇಕ ಸಚಿವರು, ಬಿಜೆಪಿಯ ಸಂಸದರು ಶುಭ ಹಾರೈಸಿ ಕೈಕುಲುಕುತ್ತಿದ್ದುದು, ‘ಅವರಿಗೆ ರಾಜ್ಯದಲ್ಲಿ ಪ್ರಮುಖ ಸ್ಥಾನ ದೊರೆಯಲಿದೆ’ ಎಂಬ ಮುನ್ಸೂಚನೆಯನ್ನು ನೀಡುವಂತಿತ್ತು.

ಇತ್ತ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೂ ಗುರುವಾರವಿಡೀ ಅನೇಕರ ಶುಭಾಶಯ ಸ್ವೀಕರಿಸುವುದರಲ್ಲೇ ತಲ್ಲೀನರಾಗಿದ್ದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಕೋಲಾರ ಸಂಸದ ಮುನಿಸ್ವಾಮಿ, ಕೇಂದ್ರ ಸಚಿವರಾಗಿರುವ ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಡಿ.ಮುರುಗನ್‌ ಮತ್ತಿತರರು ‘ಶುಭವಾಗಲಿ’ ಎಂದು ಸಿ.ಟಿ. ರವಿ ಅವರನ್ನು ಹಾರೈಸಿದ್ದು ವಿಶೇಷವಾಗಿತ್ತು.

ಪಕ್ಷದ ತಮಿಳುನಾಡು ಉಸ್ತುವಾರಿಯಾಗಿರುವ ರವಿ ಅವರ ಕಚೇರಿಗೆ ಬಂದಿದ್ದ ರಾಮೇಶ್ವರದ ದೇವಸ್ಥಾನದ ಮೂವರು ಅರ್ಚಕರು, ಪೂಜೆ ನೆರವೇರಿಸಿ, ಮಂತ್ರ ಪಠಿಸುವ ಮೂಲಕ ಶುಭ ಹಾರೈಸಿ ಪ್ರಸಾದ ನೀಡಿ ತೆರಳಿದರು.

ಸ್ಥಳದಲ್ಲೇ ಇದ್ದ ಸಂಸದ ಮುನಿಸ್ವಾಮಿ, ಸಿ.ಟಿ. ರವಿ ಅವರು ನೀಡಿದ ಪ್ರಸಾದವನ್ನು ಸ್ವೀಕರಿಸಿ ಶುಭ ಕೋರಿದರಲ್ಲದೆ, ಕಾಲಿಗೆ ನಮಸ್ಕರಿಸಿ ಮರಳಿದರು.

ವಾರಾಣಸಿಯಿಂದ ದೆಹಲಿಗೆ ಬಂದಿರುವ ಶಾಸಕ ಅರವಿಂದ ಬೆಲ್ಲದ್‌ ಅವರೂ ನಂತರ ರವಿ ಅವರ ಕಚೇರಿಗೆ ಬಂದು ಪ್ರಸಾದ ವಿತರಿಸಿ ಸ್ವಲ್ಪ ಹೊತ್ತು ಚರ್ಚೆ ನಡೆಸಿದರಲ್ಲದೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಏತನ್ಮಧ್ಯೆ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗುರುವಾರವೂ ಪಕ್ಷದ ಕೆಲವು ಮುಖಂಡರನ್ನು ಭೇಟಿ ಮಾಡಿದ್ದು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರೊಂದಿಗೆ ಚರ್ಚೆ ನಡೆಸಿದರು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬುಧವಾರ ಸಂಜೆ ಬಿ.ಎಲ್‌. ಸಂತೋಷ್‌, ಅರುಣ್‌ ಸಿಂಗ್‌ ಸೇರಿದಂತೆ ಕೆಲವು ಮುಖಂಡರನ್ನು ಭೇಟಿಯಾಗಿ ರಾಜ್ಯಕ್ಕೆ ಮರಳಿದ್ದಾರೆ.

ಈ ಭೇಟಿಯ ವೇಳೆ ಅವರು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿರಬಹುದು ಎಂದು ತಿಳಿದುಬಂದಿದೆ.

‘ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡುತ್ತಿಲ್ಲ’

ನವದೆಹಲಿ: ‘ಯಡಿಯೂರಪ್ಪ ಅವರಿಗೆ ಪಕ್ಷ ಅನ್ಯಾಯ ಮಾಡುತ್ತಿಲ್ಲ. ಪಕ್ಷ ಇದುವರೆಗೆ ಅವರಿಗೆ ಎಲ್ಲ ಅಧಿಕಾರವನ್ನೂ ನೀಡಿದೆ. ಅವರೂ ದುಡಿದು, ಪಕ್ಷ ಬೆಳೆಸಿದ್ದಾರೆ’ ಎಂದು ಸಿ.ಟಿ. ರವಿ ಹೇಳಿದರು.

‘ಯಡಿಯೂರಪ್ಪ ಅವರ ನಿರ್ಗಮನ ಖಚಿತವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರಾದ ಯಡಿಯೂರಪ್ಪ ಅವರಿಗೆ ಮಹತ್ವದ ಹುದ್ದೆಗಳನ್ನು ನೀಡಿ ಗೌರವದಿಂದ ನಡೆಸಿಕೊಳ್ಳಲಾಗಿದೆ ಎಂದರು.

‘ನಾನಂತೂ ಮುಖ್ಯಮಂತ್ರಿ ಸ್ಥಾನದ ಕನಸು ಕಂಡಿಲ್ಲ. ಹೊಸ ಕೋಟ್‌ ಹೊಲಿಸಿಕೊಂಡು ಕುಳಿತವನಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯೆ ನೀಡದ ಅರುಣ್ ಸಿಂಗ್

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಗುರುವಾರ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಲಿದ್ದಾರೆಯೇ’, ‘ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.