ADVERTISEMENT

ಬಂಕಾಪುರ ತೋಳಧಾಮ: 5 ತೋಳ ಮರಿಗಳ ಜನನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 20:34 IST
Last Updated 14 ಫೆಬ್ರುವರಿ 2025, 20:34 IST
ತೋಳದ ಮರಿಗಳು
ತೋಳದ ಮರಿಗಳು   

ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪುರ ತೋಳಧಾಮದಲ್ಲಿ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ನೀಡಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಂರಕ್ಷಿತ ತೋಳಧಾಮದಲ್ಲಿ ಅಳಿನಂಚಿನಲ್ಲಿರುವ ಬೂದು ತೋಳ (ಇಂಡಿಯನ್ ಗ್ರೇ ಉಲ್ಫ್) ಸಂತತಿ ಹೆಚ್ಚಳವಾಗುತ್ತಿದ್ದು, ಅಲ್ಲಿ ಈಗ ತೋಳಗಳ ಸಂಖ್ಯೆ 40ರಿಂದ 45ಕ್ಕೆ ಏರಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟೇರ್‌ ಪ್ರದೇಶದಲ್ಲಿ ಬಂಕಾಪುರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದೆ. ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿ ಹೆಚ್ಚಳವಾಗುವುದಕ್ಕೆ ಇದೂ ಒಂದು ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ADVERTISEMENT

ಕಳೆದ ತಿಂಗಳು ಇದೇ ಕುರುಚಲು ಕಾಡಿನಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿತ್ತು. ಈಗ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ಕೊಟ್ಟಿದೆ. ನೈಸರ್ಗಿಕ ಗುಹೆಗಳು, ಬೆಟ್ಟ ಗುಡ್ಡಗಳನ್ನೂ ಹೊಂದಿರುವ ಈ ಧಾಮದಲ್ಲಿ, ತೋಳ, ಚಿರತೆ, ನವಿಲು, ಕತ್ತೆ ಕಿರುಬ, ನರಿ, ಮೊಲ, ಮುಳ್ಳು ಹಂದಿ ಮೊದಲಾದ ವನ್ಯಜೀವಿಗಳಿವೆ. ಕಳ್ಳಬೇಟೆ ತಡೆಗೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮರಿಗಳಿರುವ ಗುಹೆಗಳ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.