ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಕೋವಿಡ್‌–19ಗೆ ಮೊದಲ ಬಲಿ

ಉಸಿರಾಟದ ತೊಂದರೆಯಿಂದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 11:51 IST
Last Updated 19 ಏಪ್ರಿಲ್ 2020, 11:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಮಂಗಳೂರು: ಉಸಿರಾಟದ ತೊಂದರೆಯಿಂದ ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದು, ಮಹಿಳೆಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಸಬಾ ಗ್ರಾಮದ ಸುಮಾರು 45 ವರ್ಷದ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಶನಿವಾರ ಅವರನ್ನು ವೆನ್ಲಾಕ್‌ನಲ್ಲಿರುವ ಕೋವಿಡ್–19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಟಲ ದ್ರವದ ಮಾದರಿಯನ್ನು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರ ಬೆಳಿಗ್ಗೆ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಮಧ್ಯಾಹ್ನ ವರದಿ ಬಂದಿದ್ದು, ಮಹಿಳೆಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ADVERTISEMENT

ಕೋವಿಡ್‌–19 ನಿಂದ ಮೃತಪಟ್ಟಿರುವುದು ಖಚಿತವಾಗಿದ್ದರಿಂದ ವೈದ್ಯಕೀಯ ಶಿಷ್ಟಾಚಾರದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡದ ನೇತೃತ್ವದಲ್ಲಿ ಮಹಿಳೆಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್–19 ಸೋಂಕಿನಿಂದ ಮಹಿಳೆ ಮೃತಪಟ್ಟಿದ್ದರಿಂದ ಬಂಟ್ವಾಳ ತಾಲ್ಲೂಕಿನ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.