ADVERTISEMENT

ನೆಪ ಮಾತ್ರದ ಮಹಿಳಾ ವಿಜ್ಞಾನ ಕಾಂಗ್ರೆಸ್‌

ಇತ್ತೀಚಿನ ಮಹಿಳಾ ವಿಜ್ಞಾನಿಗಳ ಸಾಧನೆ–ಸಂಶೋಧನೆಗಳ ಮೇಲೆ ಬೀಳದ ಬೆಳಕು * ಮಹಿಳಾ ಆರೋಗ್ಯ ಜಾಗೃತಿಯೂ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 19:45 IST
Last Updated 5 ಜನವರಿ 2020, 19:45 IST
ಮಹಿಳಾ ವಿಜ್ಞಾನ ಕಾಂಗ್ರೆಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ್ದ ಆಸಕ್ತರು ಪ್ರಜಾವಾಣಿ ಚಿತ್ರ
ಮಹಿಳಾ ವಿಜ್ಞಾನ ಕಾಂಗ್ರೆಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ್ದ ಆಸಕ್ತರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಜಿವಿಕೆವಿಕೆಯಲ್ಲಿ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಂಗವಾಗಿ ಭಾನುವಾರ ನಡೆದ ಮಹಿಳಾ ವಿಜ್ಞಾನ ಸಮಾವೇಶ ನೆಪಮಾತ್ರಕ್ಕೆ ನಡೆದಂತಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಇತ್ತೀಚಿನ ಸಾಧನೆ ಅಥವಾ ಸಂಶೋಧನೆಯ ಪ್ರಗತಿ ಬಿಂಬಿಸುವ ಕಾರ್ಯ ಆಗಿಲ್ಲ.

ಸಮಾವೇಶ ಪ್ರಾರಂಭವಾಗಿದ್ದೇ ನಿಗದಿತ ಸಮಯಕ್ಕಿಂತ ಒಂದೂವರೆ ತಾಸು ತಡವಾಗಿ. ಮುಖ್ಯ ಅತಿಥಿಯಾಗಿದ್ದ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಮಹಿಳಾ ವಿಜ್ಞಾನ ಕಾಂಗ್ರೆಸ್‌ಗೆ ಸಂಬಂಧಿಸಿದ ಗೋಷ್ಠಿಗಳು ಕೂಡ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಚರ್ಚೆ, ಸಂವಾದ, ವಿಶ್ಲೇಷಣೆಗಿಂತ ಹೆಚ್ಚು ಭಾಷಣಕ್ಕೆ ಉದ್ಘಾಟನಾ ಕಾರ್ಯಕ್ರಮ ಸೀಮಿತವಾಯಿತು.

ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ವಿವಿಧ ವಸ್ತುಪ್ರದರ್ಶನ ಮಳಿಗೆಗಳು ಮತ್ತು ಅವರು ಮಾಡಿರುವ ಸಂಶೋಧನೆಗಳು ಗಮನ ಸೆಳೆಯುತ್ತಿದ್ದರೆ, ಮಹಿಳಾ ಸಮಾವೇಶದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮತ್ತು ಕೃಷಿ ಆಧಾರಿತ ವಿಷಯಗಳ ಭಿತ್ತಿಪತ್ರಗಳನ್ನು ಮಾತ್ರ ಪ್ರದರ್ಶಿಸಲಾಗಿತ್ತು.

ADVERTISEMENT

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಪ್ರಧಾನ ನಿರ್ದೇಶಕ ತ್ರಿಲೋಚನ್‌ ಮಹಾಪಾತ್ರ, ‘ಮಹಿಳಾ ವಿಜ್ಞಾನಿಗಳನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಆದರೂ, ವಿಶ್ವದಲ್ಲಿ ಹೋಲಿಸಿದರೆ, ಭಾರತದಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಬರುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ’ ಎಂದರು.

ಡಿಆರ್‌ಡಿಒ ವೈಮಾನಿಕ ವ್ಯವಸ್ಥೆ ವಿಭಾಗದ ಪ್ರಧಾನ ನಿರ್ದೇಶಕಿ ಟೆಸ್ಸಿ ಥಾಮಸ್‌, ‘ಭವಿಷ್ಯದಲ್ಲಿ ನ್ಯಾನೊ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಲಿದೆ. ಈಗ ಒಂದು ಮಾತ್ರೆ ತೆಗೆದುಕೊಂಡರೆ ಶೀತ ಗುಣಮುಖವಾಗುವಂತೆ, ಕ್ಯಾನ್ಸರ್ ಕೂಡ ಒಂದೇ ಗುಳಿಗೆ ಸೇವಿಸಿದರೆ ವಾಸಿಯಾಗುವ ಮಟ್ಟದಲ್ಲಿ ನ್ಯಾನೊ ತಂತ್ರಜ್ಞಾನ ವೃದ್ಧಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.