ADVERTISEMENT

ಹೆಣ್ಣು ದಿಟ್ಟವಾಗಿ ಬರೆದರೆ ಅನುಮಾನದ ಕಣ್ಣು

ಸುಕೃತ ಎಸ್.
Published 8 ಆಗಸ್ಟ್ 2025, 23:18 IST
Last Updated 8 ಆಗಸ್ಟ್ 2025, 23:18 IST
‘ಸ್ತ್ರೀ ಎಂದರೆ ಅಷ್ಟೇ ಸಾಕೆ?:ಮಹಿಳಾ ಬರಹ’ ಗೋಷ್ಠಿಯಲ್ಲಿ ಲೇಖಕಿಯರಾದ ಶಾಂತಿ ಅಪ್ಪಣ್ಣ (ಎಡದಿಂದ) ಹೇಮಾ ಪಟ್ಟಣಶೆಟ್ಟಿ, ಪದ್ಮಿನಿ ನಾಗರಾಜು ಮತ್ತು ಕುಸುಮಾ ಆಯರಹಳ್ಳಿ ಭಾಗಹಿಸಿದ್ದರು –ಪ್ರಜಾವಾಣಿ ಚಿತ್ರ
‘ಸ್ತ್ರೀ ಎಂದರೆ ಅಷ್ಟೇ ಸಾಕೆ?:ಮಹಿಳಾ ಬರಹ’ ಗೋಷ್ಠಿಯಲ್ಲಿ ಲೇಖಕಿಯರಾದ ಶಾಂತಿ ಅಪ್ಪಣ್ಣ (ಎಡದಿಂದ) ಹೇಮಾ ಪಟ್ಟಣಶೆಟ್ಟಿ, ಪದ್ಮಿನಿ ನಾಗರಾಜು ಮತ್ತು ಕುಸುಮಾ ಆಯರಹಳ್ಳಿ ಭಾಗಹಿಸಿದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ಹೆಣ್ಣು ಏನನ್ನು ಬರೆಯಬೇಕು? ಆಕೆ ರಚಿಸುವ ಸಾಹಿತ್ಯದ ಕಥಾವಸ್ತು ಏನಾಗಿರಬೇಕು ಮತ್ತು ಏನಾಗಿರಬಾರದು. ಲೈಂಗಿಕತೆ ಅಥವಾ ಪ್ರಣಯದ ಕುರಿತು ಬರೆದರೆ ಅದು ಆಕೆಯ ಸ್ವಂತ ಅನುಭವವೇ ಆಗಿರಬೇಕು ಎನ್ನುವ ಸಮಾಜ. ತನ್ನ ದೇಹದ ಅಂಗಗಳ ಕುರಿತು ಬರೆದರೆ, ಇವಳು ‘ಅಂಥವಳೇ’ ಇರಬೇಕು ಎನ್ನುವ ಫೇಸ್‌ಬುಕ್‌ ದಾಳಿಗಳು...

ಮಹಿಳಾ ಸಾಹಿತ್ಯ ಮತ್ತು ಸಾಹಿತ್ಯ ಸೃಷ್ಟಿಸುವ ಮಹಿಳೆಯ ಕುರಿತು ಇಂಥ ಹಲವು ಆಯಾಮದ ಚರ್ಚೆಗೆ ಬುಕ್‌ಬ್ರಹ್ಮ ಸಾಹಿತ್ಯ ಉತ್ಸವದ ‘ಅಂಗಳ’ ವೇದಿಕೆಯಲ್ಲಿ ನಡೆದ ‘ಸ್ತ್ರೀ ಎಂದರೆ ಅಷ್ಟೇ ಸಾಕೆ?: ಮಹಿಳಾ ಬರಹ’ ಎನ್ನುವ ಗೋಷ್ಠಿ ಸಾಕ್ಷಿಯಾಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ಲೇಖಕಿಯರಾದ ಹೇಮಾ ಪಟ್ಟಣಶೆಟ್ಟಿ, ಪದ್ಮಿನಿ ನಾಗರಾಜು, ಶಾಂತಿ ಅಪ್ಪಣ್ಣ ಅವರು ತಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಂಡರು.

‘ಲೇಖಕನೊಬ್ಬ ತನ್ನ ಸಾಹಿತ್ಯದಲ್ಲಿ ಬರೆಯುವ ಪ್ರಣಯ ಹಾಗೂ ಲೈಂಗಿಕತೆಯ ವಿವರಗಳು ಆತನ ಕಲೆಗಾರಿಕೆ ಎನ್ನಲಾಗುತ್ತದೆ. ಆದರೆ, ಇಂಥದ್ದನ್ನು ಹೆಣ್ಣೊಬ್ಬಳು ಬರೆಯಬಾರದು ಎಂದು ಈ ಸಮಾಜ ಬಯಸುತ್ತದೆ. ಒಂದು ವೇಳೆ ಇಂಥ ಸಾಹಿತ್ಯವನ್ನು ಹೆಣ್ಣೊಬ್ಬಳು ಬರೆದಳು ಎಂದಾದರೆ ಆ ಸಾಹಿತ್ಯವನ್ನು ಓದಬಾರದು ಎನ್ನಲಾಗುತ್ತದೆ’ ಎಂದು ಲೇಖಕಿಯರಾದ ಪದ್ಮಿನಿ ಮತ್ತು ಚರ್ಚೆಯ ಸಮನ್ವಯಕಾರರಾಗಿದ್ದ ಕುಸುಮಾ ಆಯರಹಳ್ಳಿ ಹೇಳಿದರು.

ADVERTISEMENT

ಸಮಾರಂಭವೊಂದರಲ್ಲಿ ಕವಯತ್ರಿ ಮಮತಾ ಸಾಗರ್‌ ಅವರು ವಾಚಿಸಿದ ಕವನ ಮತ್ತು ಅದರ ಸುತ್ತ ಇತ್ತೀಚೆಗೆ ಹುಟ್ಟಿಕೊಂಡ ವಿವಾದದ ಕುರಿತು ಲೇಖಕಿ ಹೇಮಾ ಪ್ರಸ್ತಾಪಿಸಿದರು. ‘ನಿಸ್ಸಂಕೋಚವಾಗಿ ಅಥವಾ ದಿಟ್ಟವಾಗಿ ಬರೆಯುವ ಮಹಿಳೆಯರನ್ನು ಈ ಸಮಾಜವು ಅವಮಾನಿಸುತ್ತದೆ ಮತ್ತು ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಇದೇ ಮಾದರಿ ಗಂಡಸರು ಬರೆಯುವ ಸಾಹಿತ್ಯಕ್ಕೆ ಅನ್ವಯಿಸುವುದಿಲ್ಲ’ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

‘ಯಾಕ್ರಿ ಹಿಂಗೆಲ್ಲಾ ಬರೀತೀರಾ?’

ನಾನು ಬರೆದ ‘ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ’ ಎನ್ನುವ ಕಥಾ ಸಂಕಲನದಲ್ಲಿ ಒಂದು ಕಥೆ ಇದೆ. ಅದರಲ್ಲಿ ಹೆಣ್ಣೊಬ್ಬಳು ತನ್ನ ಗಂಡನನ್ನು ಬಿಟ್ಟು ಬೇರೆಯವನನಿಂದ ಮಗು ಪಡೆದುಕೊಳ್ಳಲು ನಿರ್ಧರಿಸುತ್ತಾಳೆ. ಈ ಕಥೆಯ ಕುರಿತು ಆನ್‌ಲೈನ್‌ ಕಾರ್ಯಕ್ರಮವೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಆಗ ಖ್ಯಾತ ವಿಮರ್ಶಕರೊಬ್ಬರು ಪ್ರತಿಕ್ರಿಯಿಸಿ ‘ಯಾಕ್ರಿ ಮಹಿಳೆಯರು ಹಿಂಗೆಲ್ಲ ಬರೀತೀರಾ?’ ಅಂತ ಕೇಳಿದರು ಪದ್ಮಿನಿ ನಾಗರಾಜು ಲೇಖಕಿ ---------- ‘ನಿಮ್ಮ ಅನುಭವನಾ?’ ನಾನು ‘ಪಯಣ’ ಅಂತ ಒಂದು ಕಥೆ ಬರೆದಿದ್ದೆ. ಅದರಲ್ಲಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೆಣ್ಣೊಬ್ಬಳು ಪುರುಷನೊಂದಿಗೆ ಬರ್ಥ್‌ ಅನ್ನು ಹಂಚಿಕೊಳ್ಳುವ ಕಥೆ ಬರುತ್ತದೆ. ಈ ಕಥೆ ಓದಿದ ಹಲವರು ನನ್ನ ಬಳಿ ಬಂದು ಇದು ನಿಮ್ಮ ಸ್ವಂತ ಅನುಭವವೇ
ಎಂದು ಕೇಳಿದ್ದರು ಶಾಂತಿ ಅಪ್ಪಣ್ಣ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.