ADVERTISEMENT

ಸಂಜೆ 6ರ ನಂತರ ಮಹಿಳೆ ಮನೆ ಸೇರಬೇಕೆಂಬ ಭಾವನೆ ನೀಗಲಿ: ಚಿಂತಕಿ ಓಲ್ಗಾ

ಮಂಡ್ಯದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ; ಚಿಂತಕಿ, ಸಾಹಿತಿ ಓಲ್ಗಾ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 12:29 IST
Last Updated 7 ಮಾರ್ಚ್ 2020, 12:29 IST
ಮಹಿಳಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಓಲ್ಗಾ ಅವರಿಗೆ ಕೌದಿ ಹೊದಿಸಿ ಅಭಿನಂದಿಸಲಾಯಿತು
ಮಹಿಳಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಓಲ್ಗಾ ಅವರಿಗೆ ಕೌದಿ ಹೊದಿಸಿ ಅಭಿನಂದಿಸಲಾಯಿತು   

ಮಂಡ್ಯ: ‘ಸಂಜೆ 6 ಗಂಟೆಯಾಗುತ್ತಲೇ ಹೆಣ್ಣು ಮಕ್ಕಳು ಮನೆ ಸೇರಬೇಕು ಎಂದು ಪೋಷಕರು ಬಯಸುತ್ತಾರೆ. ಸರ್ಕಾರಗಳೂ ಇದೇ ಸೂಚನೆ ಕೊಡುತ್ತವೆ. ಆದರೆ ಮನೆ ಸೇರಬೇಕಾದವಳು ಮಹಿಳೆಯಲ್ಲ, ಮಹಿಳೆ ಮೇಲೆ ಹಿಂಸೆ ಮಾಡುವವರೇ ಮನೆ ಸೇರಿಕೊಳ್ಳಲಿ, ಮಹಿಳೆ ಬೀದಿಗಿಳಿಯಲಿ, ಬೀದಿಗಳು ಹೆಣ್ಣಿನ ಅಸ್ಮಿತೆಯ ಸ್ವತ್ತಾಗಲಿ’ ಎಂದು ಚಿಂತಕಿ, ಸಾಹಿತಿ ಓಲ್ಗಾ ಅಭಿಪ್ರಾಯಪಟ್ಟರು.

ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿವಿ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಹೆಣ್ಣು ಮಕ್ಕಳು ಮನೆ ಸೇರಿಕೊಳ್ಳಲಿ ಎಂದು ಪೋಷಕರು ಸಕಾರಣದಿಂದ ಹೇಳುತ್ತಾರೆ. ಮಹಿಳೆಯೊಬ್ಬಳೇ ಮನೆಯಿಂದ ಹೊರಗೆ ಹೋಗುವ ಬದಲು ಗುಂಪಾಗಿ ಹೋಗಬೇಕು. ಇದರಿಂದ ಮಹಿಳಾ ಐಕ್ಯತೆಯ ಬಲ ತಿಳಿಯುತ್ತದೆ, ಸ್ವಾತಂತ್ರ್ಯ ಅರಿವಿಗೆ ಬರುತ್ತದೆ. ಮನೆಯಲ್ಲಿ ಕುಳಿತರೆ ಮಹಿಳೆ ಅಬಲೆಯಾಗಿಬಿಡುತ್ತಾಳೆ. ಹಗಲು– ರಾತ್ರಿಯ ಪರಿಚಯ ಅವಳಿಗೆ ಸಿಗಬೇಕು, ಪ್ರತಿ ಹೆಜ್ಜೆಯ ಸವಾಲುಗಳನ್ನು ಎದುರಿಸಬೇಕು. ಆಗ ಮಾತ್ರ ಮಹಿಳೆ ಸಬಲೆಯಾಗುತ್ತಾಳೆ’ ಎಂದರು.

ADVERTISEMENT

‘ಹಿಂಸೆ, ಅತ್ಯಾಚಾರ ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ. ಹಿಂಸೆಯ ಹೆಸರಿನಲ್ಲಿ ಮಹಿಳೆಯನ್ನು ಭಯದ ಕೂಪದಲ್ಲಿರಿಸುವ, ಮನೆಯಲ್ಲಿ ಕಟ್ಟಿಹಾಕುವ ಯತ್ನ ಮಾಡಲಾಗುತ್ತಿದೆ. ನಾಲ್ಕು ಗೋಡೆಯ ನಡುವೆ ಯಾಂತ್ರೀಕೃತ ಜೀವನದಿಂದ ಹೊರಬರಬೇಕು. ತಲೆ ಎತ್ತಿ ನಡೆಯುವ ವಾತಾವರಣ ಸೃಷ್ಟಿಯಾಗಬೇಕು’ ಎಂದರು.

ಓಟ್‌ ಬ್ಯಾಂಕ್‌: ‘ಹಣ ಉಳಿತಾಯದ ಉದ್ದೇಶದಿಂದ ಹಳ್ಳಿಗಳಲ್ಲಿ ರಚಿಸಲಾಗಿರುವ ಮಹಿಳಾ ಸಂಘಗಳನ್ನು ರಾಜಕಾರಣಿಗಳು ಓಟ್‌ಬ್ಯಾಂಕ್‌ ಮಾಡಿಕೊಂಡಿದ್ದಾರೆ. ಆ ಮೂಲಕ ಮಹಿಳಾ ಐಕ್ಯತೆಯನ್ನು ಒಡೆದುಹಾಕುತ್ತಿದ್ದಾರೆ. ರಾಜಕೀಯ ಮೀಸಲಾತಿ ಕನಸಿನ ಮಾತಾಗಿದೆ. ಇಂತಹ ತಲ್ಲಣದ ಸಂದರ್ಭದಲ್ಲಿ ಮಹಿಳೆ ಭಿನ್ನ ದಾರಿಯಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪಿತೃ ಪ್ರಧಾನ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ಮಹಿಳೆಯ ಮುಂದಿರುವ ಪ್ರಮುಖ ಸವಾಲಾಗಿದೆ. ಪುರುಷ ಪ್ರಧಾನ ಸಮಾಜ ಇನ್ನಿಲ್ಲವಾದರೆ ಮಾತ್ರ ಅಸಮಾನತೆ ತೊಲಗುತ್ತದೆ. ಮಹಿಳಾ ಹಕ್ಕುಗಳು ಮಾನವ ಹಕ್ಕುಗಳೂ ಆಗಿವೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ವಿಭಾಗವನ್ನು ಕಡ್ಡಾಯವಾಗಿ ಸ್ಥಾಪಿಸಬೇಕು’ ಎಂದರು.

ಮಹಿಳಾ ವಿವಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಒಕ್ಕೂಟದ ಸದಸ್ಯೆಯರಾದ ಸುನಂದಾ ಜಯರಾಂ, ಶಾರದಾ ಗೋಪಾಲ, ಮೀರಾ ಶಿವಲಿಂಗಯ್ಯ, ಡಾ.ಎಚ್‌.ಎಂ.ಹೇಮಲತಾ, ರಾಧಾಮಣಿ, ಮೋಲಿ ಫುಡ್ತಾಡೊ ಇದ್ದರು.

************

ಮಹಿಳೆಯರೇ ರೂಪಿಸಿದ್ದ ‘ಕೌದಿ’ ಹೊದಿಕೆ

ಸಮಾವೇಶಕ್ಕೆ ರೂಪಕವಾಗಿ ಬಣ್ಣಬಣ್ಣದ ಬಟ್ಟೆಯ ತುಂಡುಗಳಿಂದ ಒಕ್ಕೂಟದ ಸದಸ್ಯೆಯರೇ ಕಸೂತಿ ಹಾಕಿದ್ದ ಕೌದಿಯನ್ನು ಓಲ್ಗಾ ಅವರಿಗೆ ಹೊದಿಸಿ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ‘ಅರಿವಿನ ಪಯಣ’ ಸಭೆ, ಶಿಬಿರಗಳು ನಡೆದಿದ್ದವು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಮಹಿಳೆಯರು ಬಣ್ಣಬಣ್ಣದ ಬಟ್ಟೆ ತಂದು ಹಾಡು, ನೃತ್ಯ, ಚಿಂತನ–ಮಂಥನದೊಂದಿಗೆ ಕಸೂತಿ ಮಾಡಿ ಕೌದಿ ಹೊಲಿದಿದ್ದರು. ಕೌದಿ ಮಹಿಳೆಯರ ಅಸ್ಮಿತೆಯ ರೂಪಕವಾಗಿ ಅನಾವರಣಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.