ADVERTISEMENT

ಕೋವಿಡ್ ನಿಯಂತ್ರಣ: ಮಧುಮೇಹ ಉಲ್ಬಣ

ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆ

ವರುಣ ಹೆಗಡೆ
Published 13 ನವೆಂಬರ್ 2021, 19:31 IST
Last Updated 13 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮಧುಮೇಹ ತಪಾಸಣೆಗೆಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಿಗೆ (ಎನ್‌ಸಿಡಿ) ಭೇಟಿ ನೀಡುವವರ ಸಂಖ್ಯೆ ಏರಿಕೆಕಂಡಿದೆ. ಈ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 12.80 ಲಕ್ಷ ಮಂದಿ ತಪಾಸಣೆಗೆ ಒಳಗಾಗಿದ್ದು, 27,990 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ವರ್ಷಾಂತ್ಯದಲ್ಲಿನಿಯಂತ್ರಣಕ್ಕೆ ಬಂದ ಸೋಂಕು, ಈ ವರ್ಷ ಮಾರ್ಚ್‌ ಬಳಿಕ ಏರುಗತಿ ಪಡೆದುಕೊಂಡಿತ್ತು. ಇದರಿಂದಾಗಿ ಕೋವಿಡೇತರ ಕಾಯಿಲೆಗಳ ತಪಾಸಣೆ ಸಂಬಂಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಜುಲೈ ಬಳಿಕ ಕೋವಿಡ್ ಎರಡನೇ ಅಲೆ ನಿಯಂತ್ರಕ್ಕೆ ಬಂದಿರುವುದರಿಂದ ಕೋವಿಡೇತರ ಸಮಸ್ಯೆಗಳ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಮಧುಮೇಹ ಸಮಸ್ಯೆ ಹೆಚ್ಚಿನವರಲ್ಲಿ ಪತ್ತೆಯಾಗುತ್ತಿದೆ.

ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ ತಪಾಸಣೆ ನಡೆಸುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಹಂತದ 30 ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್‌.ಸಿ–ಎನ್‌.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್‌ಗಳಿಗೆ 2019–20ನೇ ಸಾಲಿನಲ್ಲಿ 36.07 ಲಕ್ಷ ಮಂದಿ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದರು. ಕಳೆದ ಸಾಲಿನಲ್ಲಿ ಈ ಸಂಖ್ಯೆ 20.09 ಲಕ್ಷಕ್ಕೆ ಇಳಿಕೆ ಕಂಡಿತ್ತು.

ADVERTISEMENT

ಪ್ರಸಕ್ತ ಸಾಲಿನಲ್ಲಿ ಮೊದಲ ಮೂರು ತಿಂಗಳು 4 ಲಕ್ಷ ಮಂದಿ ಮಾತ್ರ ಕ್ಲಿನಿಕ್‌ಗಳಿಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದರು. ಆ ಸಂಖ್ಯೆ ಮುಂದಿನ ಮೂರು ತಿಂಗಳಲ್ಲಿ ದುಪ್ಪಟ್ಟಾಗಿದೆ.

ಇನ್ನಷ್ಟು ಹೆಚ್ಚಳ ಸಾಧ್ಯತೆ:‘ಕೋವಿಡ್ ಕಾಣಿಸಿಕೊಂಡ ಬಳಿಕ ಬದಲಾದ ಜೀವನ ವಿಧಾನದಿಂದ ಮಧುಮೇಹ ಪ್ರಕರಣಗಳು ಹೆಚ್ಚಳವಾಗಿವೆ.ವ್ಯಾಯಾಮದ ಕೊರತೆ, ಬದಲಾದ ಆಹಾರಾಭ್ಯಾಸ, ಅತಿಯಾದ ಬೊಜ್ಜಿನ ಸಮಸ್ಯೆ ಮಧುಮೇಹಕ್ಕೆ ಪ್ರಮುಖ ಕಾರಣ. ಕೋವಿಡ್‌ ಪೀಡಿತರು ಹೆಚ್ಚಾಗಿ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೊರೊನಾ ಸೋಂಕುದೇಹದಲ್ಲಿನ ಮೇದೋಜಿರಕಾಂಗ (ಪ್ಯಾಂಕ್ರಿಯಾ)ಗ್ರಂಥಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿ, ಮಧುಮೇಹಕ್ಕೆ ಕಾರಣವಾಗುತ್ತದೆ. ಮಧುಮೇಹಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ಮಧುಮೇಹ ತಜ್ಞರು ಕಳವಳವ್ಯಕ್ತಪಡಿಸಿದ್ದಾರೆ.

‘ಪ್ರಾರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಮಾಡಿದಲ್ಲಿ ನಿಯಂತ್ರಣ ಸಾಧ್ಯ. ಸಮತೋಲನ ಆಹಾರ ಸೇವನೆ, ದೈಹಿಕ ಚಟುವಟಿಕೆ ಜೊತೆಗೆ ಉತ್ತಮ ಜೀವನ ವಿಧಾನ ಅಳವಡಿಸಿಕೊಳ್ಳಬೇಕು.ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ’ ಎಂದು ನಾರಾಯಣ ಹೆಲ್ತ್‌ ಸಿಟಿಯ ಡಾ.ಸುಬ್ರಹ್ಮಣ್ಯನ್ ಕಣ್ಣನ್ ತಿಳಿಸಿದರು.

ಎನ್‌ಸಿಡಿ ಕ್ಲಿನಿಕ್‌ನಲ್ಲಿ ನಡೆದ ತಪಾಸಣೆ

ವರ್ಷ; ಭೇಟಿ ನೀಡಿದವರು; ಪ್ರಕರಣ ಪತ್ತೆ; ಚಿಕಿತ್ಸೆ ಪಡೆದವರು; ಚಿಕಿತ್ಸೆ ಮುಂದುವರಿಕೆ

2019–2020; 36.07 ಲಕ್ಷ; 96,989; 87,055; 5.18 ಲಕ್ಷ

2020–21; 20.94 ಲಕ್ಷ; 49,392; 42,603; 3.41 ಲಕ್ಷ

2021–22 (ಸೆಪ್ಟೆಂಬರ್ ಅಂತ್ಯಕ್ಕೆ); 12.80 ಲಕ್ಷ; 27,990; 25,031; 1.93 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.