ಬೆಂಗಳೂರು: ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರೆ, ಹಲ್ಲೆ, ಕೊಲೆ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್, ತಿಂಥಿಣಿ ವೀರಗೋಟದ ಕಾಗಿನೆಲೆ ಕನಕಗುರು ಪೀಠದ ಆಶ್ರಯದಲ್ಲಿ ಬುಧವಾರ ನಡೆದ 29 ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಮಾತನಾಡಿದರು.
‘ಆದಿವಾಸಿಗಳ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಈ ಹಿಂದೆ ಯಾರೂ ನನಗೆ ದೂರು ನೀಡಿರಲಿಲ್ಲ. ಇವತ್ತು ಮಾಹಿತಿ ನೀಡಿದ್ದೀರಿ. ಅದರ ಸತ್ಯಾಸತ್ಯತೆ ಪರಿಶೀಲಿಸಲಾಗುವುದು. ದೌರ್ಜನ್ಯ ನಡೆದಿರುವುದು ನಿಜವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆಯಡಿ ವಿಲೇವಾರಿ ಆಗದ ಪ್ರಕರಣಗಳಿದ್ದರೆ ಕೂಡಲೇ ವಿಲೇ ಮಾಡಲಾಗುವುದು. 3 ಎಕರೆವರೆಗೆ ಜಮೀನು ಹೊಂದಿರುವವರನ್ನು ಒಕ್ಕೆಲೆಬ್ಬಿಸುವುದಿಲ್ಲ. ಅದಕ್ಕಿಂತ ಹೆಚ್ಚು ಕಾಡಿನ ಜಮೀನು ಆಕ್ರಮಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜನರೂ ಬದುಕಬೇಕು. ಕಾಡು, ಪರಿಸರವೂ ಉಳಿಯಬೇಕು ಎಂದರು.
ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸಿ.ಎಸ್.ದ್ವಾರಕನಾಥ ಮಾತನಾಡಿ, ‘ರಾಜ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದಿಂದ ಆದಿವಾಸಿ ಸಮುದಾಯದ 19 ಮಂದಿ ಸಾವಿಗೀಡಾಗಿದ್ದಾರೆ. ಹಲವು ಕಡೆಗಳಲ್ಲಿ ಆದಿವಾಸಿಗಳ ಮೇಲೆಯೇ ದೂರು ದಾಖಲಾಗಿದೆ‘ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ‘ಕಾಡನ್ನು ಆದಿವಾಸಿಗಳು ಉಳಿಸುತ್ತಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಹಾಳುಗೆಡಹುತ್ತಿದ್ದಾರೆ’ ಎಂದು ಆರೋಪಿಸಿದರು.
ವೀರಗೋಟ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ. ಕೃಷ್ಣಯ್ಯ, ಗೌರವಾಧ್ಯಕ್ಷ ಕೆ.ಎಂ. ಮೇತ್ರಿ, ಬುಡಕಟ್ಟು ಸಮುದಾಯಗಳ ಹೋರಾಟಗಾರ ಅಮೃತ್‌ರಾವ್ ಚಿಮ್‌ಕೋಡ್, ನಟ ಚೇತನ್ ಅಹಿಂಸಾ ಮಾತನಾಡಿದರು.
ಶೈಕ್ಷಣಿಕ ಸಾಧನೆಗಾಗಿ ಬುಡಕಟ್ಟು ಸಮುದಾಯಗಳ ಕಾವ್ಯಶ್ರೀ ಕೆ., ಸಂಗೀತಾ ಜೆ.ಕೆ., ಅಶ್ವಥ್ ಬಿ.ಆರ್., ಶ್ರೀಜಿತ್ ಎಸ್. ಅವರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ಎಂ. ಮೇತ್ರಿ ಅವರ ‘ಸೂಕ್ಷ್ಮ ಮೂಲ ಆದಿವಾಸಿಗಳು’ ಕೃತಿ ಬಿಡುಗಡೆ ಮಾಡಲಾಯಿತು.
‘ಆದಿವಾಸಿ ಹಣ ಬೇರೆ ಯೋಜನೆಗೆ ಬೇಡ’ ಆದಿವಾಸಿಗಳ ದಲಿತರ ಅಭಿವೃದ್ಧಿಗೆ ಮೀಸಲಿರಿಸುವ ಎಸ್‌ಸಿಪಿ ಟಿಎಸ್‌ಪಿ ಹಣವನ್ನು ಚುನಾವಣಾ ರಾಜಕೀಯ ಯೋಜನೆಗಳಿಗೆ ಬಳಸುವುದು ಸರಿಯಲ್ಲ. ಶ್ರೀಮಂತರಿಗೆ ತೆರಿಗೆ ವಿಧಿಸಿ ಆ ಹಣವನ್ನು ಬೇಕಾದರೆ ಆ ಯೋಜನೆಗಳಿಗೆ ಬಳಸಿಕೊಳ್ಳಿ ಎಂದು ನಟ ಚೇತನ್ ಅಹಿಂಸಾ ಸಲಹೆ ನೀಡಿದರು. ಎಸ್‌ಟಿಯಲ್ಲಿ ಬರುವ ಎಲ್ಲ ಸಮುದಾಯಗಳಿಗೆ ಸರ್ಕಾರದ ಸೌಲಭ್ಯ ಸಿಗಬೇಕಿದ್ದರೆ ಎಸ್‌ಟಿಯಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.