ಸಿದ್ದರಾಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ
ಮೈಸೂರು: ‘ಸಿದ್ದರಾಮಯ್ಯ 5 ವರ್ಷವೂ ಮುಖ್ಯಮಂತ್ರಿಯಲ್ಲ ಎಂದು ಹೇಳಿರುವವರಾರು, ನಮ್ಮ ಪಕ್ಷದ ಯಾರಾದರೂ ಆ ಮಾತನಾಡಿದ್ದಾರೆಯೇ?’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕೇಳಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೋ ಇಲ್ಲವೋ ಎಂಬ ಚರ್ಚೆಯೇ ಸರಿ ಇಲ್ಲ’ ಎಂದರು.
‘ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬುದು ವಿರೋಧ ಪಕ್ಷಗಳು ಸೃಷ್ಟಿಸಿರುವ ಚರ್ಚೆ. ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಎಂದರೆ ಅದು ಮುಖ್ಯಮಂತ್ರಿ ಬದಲಾವಣೆ ಎಂದರ್ಥವಾ? ಯಾಕೆ ಎಲ್ಲವನ್ನೂ ಸಿಎಂ ವಿಚಾರಕ್ಕೆ ಸೀಮಿತವಾಗಿ ನೋಡುತ್ತೀರಿ? ಬೇರೆ ವಿಷಯದಲ್ಲಿ ಕ್ರಾಂತಿ ಆಗಬಹುದು. ಅದೇನು ಎಂಬುದನ್ನು ಹೇಳಿದವರನ್ನೇ ಕೇಳಬೇಕು’ ಎಂದು ಪ್ರತಿಕ್ರಿಯಿಸಿದರು.
‘ಹೈಕಮಾಂಡ್, ಪಕ್ಷದ ಶಾಸಕರು ನಮ್ಮ ತಂದೆಯ ಪರವಾಗಿದ್ದಾರೆ. ಹೀಗಿರುವಾಗ, ಅವರನ್ನೇಕೆ ಕೆಳಗಿಳಿಸಲಾಗುತ್ತದೆ. ಮುಡಾ ಪ್ರಕರಣದ ಗೆಲುವಿನಿಂದಾಗಿ ತಂದೆಗೆ ರಾಜಕೀಯವಾಗಿ ಶಕ್ತಿ ವೃದ್ಧಿಸಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಅದೀಗ ನಿವಾರಣೆಯಾಗಿದೆ’ ಎಂದರು.
‘ಕಾಂಗ್ರೆಸ್‌ನಲ್ಲಿ ಮಾಸ್‌ಲೀಡರ್ ಆಗಿರುವ ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ವಿರೋಧಪಕ್ಷದವರು ಟಾರ್ಗೆಟ್ ಮಾಡುತ್ತಿರುತ್ತಾರೆ. ಅವೆಲ್ಲವನ್ನೂ ಮೀರಿ ನಾವು ನಿಲ್ಲುತ್ತಿದ್ದೇವೆ’ ಎಂದು ಹೇಳಿದರು.
‘ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ’ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಾವು ಸೋತಿದ್ದರೂ ಇಲ್ಲಿ ಗೋಲ್‌ಮಾಲ್ ಆಗಿಲ್ಲ. ಯಾವ ಊರುಗಳಿಂದಲೂ ದೂರು ಬಂದಿಲ್ಲ. ಹಾಗೇನಾದರೂ ನಡೆದಿದ್ದರೆ ಈ ವೇಳೆಗಾಗಲೇ ನಮ್ಮ ಕಾರ್ಯಕರ್ತರು ಹೇಳಿರುತ್ತಿದ್ದರು’ ಎಂದರು.
‘ಕೆಲ ಕ್ಷೇತ್ರಗಳಲ್ಲಿ ಅದು ಆಗಿರಬಹುದೇನೋ. ಆದ್ದರಿಂದಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸರ್ಕಾರದ್ದು ತನಿಖಾ ಸಂಸ್ಥೆ ಹಾಗೂ ಆಯೋಗಗಳನ್ನು ದುರುಪಯೋಗ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಹೀಗಾಗಿ ಅನುಮಾನ ಇರುವ ಕ್ಷೇತ್ರಗಳ ಬಗ್ಗೆ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.