ADVERTISEMENT

ಯಡಿಯೂರಪ್ಪ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ

ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 9:17 IST
Last Updated 10 ಸೆಪ್ಟೆಂಬರ್ 2023, 9:17 IST
ರೇಣುಕಾಚಾರ್ಯ
ರೇಣುಕಾಚಾರ್ಯ   

ದಾವಣಗೆರೆ: ಬಿಜೆಪಿಗೆ ಸಾಕಷ್ಟು ಹಾನಿಯಾದ ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದೆ ತಂದಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಯಡಿಯೂರಪ್ಪ ನೋಡದ ಹಳ್ಳಿಗಳು ಇಲ್ಲ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ದೇಶಕ್ಕೆ ನರೇಂದ್ರ ಮೋದಿ ಅವರಂತೆ ರಾಜ್ಯಕ್ಕೆ ಯಡಿಯೂರಪ್ಪ ಅವಶ್ಯಕ. ಹೋರಾಟಕ್ಕೆ, ಚುನಾವಣಾ ಪ್ರವಾಸಕ್ಕೆ, ಮತಗಳಿಗೆ ಯಡಿಯೂರಪ್ಪ ಬೇಕಾಗಿದೆ. ಯಡಿಯೂರಪ್ಪ ಕಡೆಗಣಿಸಿದ್ದೆ ಪಕ್ಷದ ಸೋಲಿಗೆ ಕಾರಣ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲು ಆಗದೇ ಇರುವವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರ ಮುಖ ನೋಡಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ ಎಂದು ವ್ಯಂಗ್ಯವಾಡಿದರು.

ADVERTISEMENT

ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಕಾಂಕ್ಷಿ. ಟಿಕೆಟ್ ಸಿಗುತ್ತದೊ ಇಲ್ಲವೋ ಕಾದು ನೋಡುತ್ತೇನೆ. ಸಿಗದೇ ಇದ್ದರೆ ಕ್ಷೇತ್ರದ ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಮಾಜಿ ಶಾಸಕ ಗುರುಸಿದ್ದನಗೌಡ ಮನೆಗೆ ಭೇಟಿ

ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಉಚ್ಚಾಟನೆ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಮಾತುಕತೆ ನಡೆಸಿದರು. ನೋಟಿಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ, ಚುನಾವಣೆಯ ಸಂದರ್ಭ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಕಟ್ಟಿದವರು. ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ದ ಕೆಲಸ ಮಾಡಿದರೆ ಆರಂಭದಲ್ಲಿ ನೋಟಿಸ್ ನೀಡಿ, ವಿವರಣೆ ಪಡೆಯಬೇಕು. ಆದರೆ ಯಾವುದನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಗುರುಸಿದ್ಧನಗೌಡ ಅವರ ಪುತ್ರ ಟಿ.ಜಿ.ರವಿಕುಮಾರ್ ಲೋಕಸಭಾ ಚುನಾವಣೆ ಟಿಕೆಟ್ ಅಕಾಂಕ್ಷಿ. ಆದ್ದರಿಂದ ಬೆಳೆಯಬಾರದು ಎಂಬ ಉದ್ದೇಶದಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.