ADVERTISEMENT

ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟ ಯಡಿಯೂರಪ್ಪ: ಕ್ಯಾರವಾನ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 12:22 IST
Last Updated 22 ಮಾರ್ಚ್ 2019, 12:22 IST
‘ದಿ ಕ್ಯಾರಾವಾನ್‌’ ಜಾಲತಾಣದಲ್ಲಿ ಪ್ರಕಟವಾಗಿರುವ ಲೇಖನ (ಎಡಚಿತ್ರ), ಯಡಿಯೂರಪ್ಪ (ಬಲಚಿತ್ರ)
‘ದಿ ಕ್ಯಾರಾವಾನ್‌’ ಜಾಲತಾಣದಲ್ಲಿ ಪ್ರಕಟವಾಗಿರುವ ಲೇಖನ (ಎಡಚಿತ್ರ), ಯಡಿಯೂರಪ್ಪ (ಬಲಚಿತ್ರ)   

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ ಬಿಜೆಪಿಯ ಹಲವು ಉನ್ನತ ನಾಯಕರಿಗೆ ಸುಮಾರು ₹1800 ಕೋಟಿ ಮೊತ್ತದಷ್ಟು ಹಣ ಪಾವತಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ‘ದಿ ಕ್ಯಾರವಾನ್’ ನಿಯತಕಾಲಿಕೆ ಶುಕ್ರವಾರ ಪ್ರಕಟಿಸಿದೆ.

‘ದಿ ಯೆಡ್ಡಿ ಡೈರೀಸ್’ ಶೀರ್ಷಿಕೆಯ ತನಿಖಾ ವರದಿಯಲ್ಲಿ ಅರುಣ್‌ ಜೇಟ್ಲಿ ಮತ್ತು ನಿತಿನ್ ಗಡ್ಕರಿ ಅವರಿಗೆ ತಲಾ ₹150 ಕೋಟಿ, ರಾಜನಾಥ್ ಸಿಂಗ್ ಅವರಿಗೆ ₹100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ತಲಾ ₹50 ಕೋಟಿ ಹಣವನ್ನು ಯಡಿಯೂರಪ್ಪ ಪಾವತಿಸಿದ್ದಾರೆ ಎಂದು ಯಡಿಯೂರಪ್ಪ ಅವರೇ ಸ್ವತಃ ಬರೆದಿದ್ದಾರೆ ಎನ್ನಲಾದ ಡೈರಿಯ ಹಾಳೆಗಳನ್ನು ಉಲ್ಲೇಖಿಸಿ ನಿಯತಕಾಲಿಕೆಯು ವರದಿ ಮಾಡಿದೆ.

ಕ್ಯಾರವಾನ್ ಪ್ರಕಟಿಸಿರುವ ಯಡಿಯೂರಪ್ಪ ಅವರು ಬರೆದಿದ್ದಾರೆ ಎನ್ನಲಾದ ಡೈರಿ.

ಆದಾಯ ತೆರಿಗೆ ಇಲಾಖೆಯ ಬಳಿ 2017ರಿಂದ ಇರುವ ಈ ಡೈರಿಯಲ್ಲಿ ‘ನಿತಿನ್ ಗಡ್ಕರಿ ಮಗನ ಮದುವೆಗೆ ₹10 ಕೋಟಿ, ನ್ಯಾಯಾಧೀಶರಿಗೆ ₹250 ಕೋಟಿ ಮತ್ತು ವಕೀಲರಿಗೆ (ಶುಲ್ಕ) ₹50 ಕೋಟಿ ಪಾವತಿಸಲಾಗಿದೆ’ ಎನ್ನುವ ಮಾಹಿತಿಯೂ ಇದೆ ಎಂದು ‘ಕ್ಯಾರವಾನ್’ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.