ADVERTISEMENT

‘ಬಿಎಸ್‌ವೈ ಅತಿ ದುರ್ಬಲ ಸಿ.ಎಂ’

ಯಾವುದೇ ಜನಪರ ಸಾಧನೆ ಇಲ್ಲ l ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:28 IST
Last Updated 1 ನವೆಂಬರ್ 2019, 19:28 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಹಿಮ್ಮುಖವಾಗಿ ಓಡುತ್ತಿದ್ದು, ಅವರು ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ, ‘ವರ್ಗಾವಣೆ ದಂಧೆ, ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಹಣದ ಹೊಳೆ ಹರಿಸಿದ್ದು ಬಿಟ್ಟರೆ ನೂರು ದಿನಗಳಲ್ಲಿ ಯಾವುದೇಜನಪರ ಸಾಧನೆ ಮಾಡಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಹಿಂದೆಂದೂ ಕಂಡರಿಯದ ಪ್ರವಾಹದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯವನ್ನು ನಿರ್ಲಕ್ಷಿಸಿ, ಅಮಾನವೀಯವಾಗಿ ನಡೆದು
ಕೊಂಡರು. ಯಡಿಯೂರಪ್ಪ ಅವರಿಗೂ ತಮ್ಮನ್ನು ಭೇಟಿ ಮಾಡಲು ಪ್ರಧಾನಿ ಅವಕಾಶವನ್ನೇ ನೀಡಲಿಲ್ಲ. ಎಲ್ಲವನ್ನು ಸಹಿಸಿಕೊಂಡು ಸುಮ್ಮನೇ ಉಳಿದ ಯಡಿಯೂರಪ್ಪ ದುರ್ಬಲರು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ನೆರೆ ಸಂತ್ರಸ್ತರಿಗೆ ನಯಾ ಪೈಸೆ ನೆರವು ನೀಡದೆ, ನೀಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಯಡಿಯೂರಪ್ಪ ಅವರನ್ನು ಜವಾಬ್ದಾರಿಯುತ ಮುಖ್ಯಮಂತ್ರಿ ಎನ್ನಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇವೆ. ಯಾರಲ್ಲಿ ಕೇಳಿದರೂ ಪರಿಹಾರ ಮತ್ತು ನೆರವಿನ ಹಣ ಸಿಕ್ಕಿಲ್ಲ ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೆ ಜನ ಹೇಳುತ್ತಿರುವುದು ಸುಳ್ಳೇ, ಪತ್ರಿಕೆಗಳು ನೆರೆ ಪೀಡಿತ ಪ್ರದೇಶಗಳ ಸಂಕಷ್ಟದ ಬಗ್ಗೆ ಬರೆದಿರುವುದು ಸುಳ್ಳೇ. ಜನ ಏನು ಹೇಳಿದ್ದಾರೋ ಅದನ್ನು ಹೇಳಿದ್ದೇನೆ. ನಾನು ಹುಟ್ಟಿಸಿಕೊಂಡು ಹೇಳುತ್ತಿಲ್ಲ’ ಎಂದು ಸಿದ್ದರಾಮಯ್ಯ ಕುಟುಕಿದರು.

ನೆರೆ ಪೀಡಿತ ಪ್ರದೇಶದಲ್ಲಿ ಏನೂ ಮಾಡದೇ ಸುಳ್ಳು ಹೇಳಿದವರು ಯಾರು? ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಹಾರ ತರಲು ಸಾಧ್ಯವಾಗಲಿಲ್ಲ? ಮೋದಿಯವರು ನೆರೆ ಪೀಡಿತ ಪ್ರದೇಶಕ್ಕೆ ಕಾಲಿಡದೇ ಅಮಾನವೀಯತೆಯಿಂದ ನಡೆದುಕೊಂಡಿದ್ದು ಸುಳ್ಳೆ ಎಂದು ಪ್ರಶ್ನಿಸಿದರು.

ಫ್ಯಾಸಿಸಂ ಲಕ್ಷಣ: ಭಾರತದ ಕೆಲವು ಪತ್ರಕರ್ತರು ಮತ್ತು ಮಾನವ ಹಕ್ಕು ಕಾರ್ಯಕರ್ತರ ಮೊಬೈಲ್‌ ವಾಟ್ಸ್‌ಆ್ಯಪ್‌ ಮೂಲಕ ನಿಗಾ ಇರಿಸಿರುವ ವಿಚಾರ ಕಾನೂನು ಬಾಹಿರ. ಕೇಂದ್ರದ ಈ ನಡವಳಿಕೆ ಫ್ಯಾಸಿಸಂನ ಲಕ್ಷಣ ಎಂದರು.

‘ಡಿ.ಕೆ.ಶಿವಕುಮಾರ್ ಜತೆ ಭಿನ್ನಮತವಿಲ್ಲ’

ಡಿ.ಕೆ.ಶಿವಕುಮಾರ್‌ ಜತೆಗೆ ಯಾವುದೇ ಭಿನ್ನಮತವಿಲ್ಲ. ಪಕ್ಷದಲ್ಲೇ ಭಿನ್ನಾಭಿಪ್ರಾಯವಿಲ್ಲ. ಕೆಲವು
ವಿಷಯಗಳ ಬಗ್ಗೆ ಅಭಿಪ್ರಾಯ ಬೇಧವಿರಬಹುದು. ಅದು ಭಿನ್ನಾಭಿಪ್ರಾಯವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಉಪಚುನಾವಣೆಗೆ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾಡಿದ್ದಾರೆ. ಚುನಾವಣೆ ನಡೆಯಲಿರುವ ಎಲ್ಲ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅದರ ಅನ್ವಯವೇ
ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದರು.

ಉಪಚುನಾವಣೆ ನಡೆಯುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 12ರಲ್ಲಿ ಗೆಲ್ಲುತ್ತೇವೆ. ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆಪಾಠ ಕಲಿಸಿದ ಮಾದರಿಯಲ್ಲಿ ರಾಜ್ಯದಲ್ಲೂ ಜನತೆ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನೇ ಟಿಪ್ಪು ಎಂದು ಹೇಳಿಕೊಂಡಿದ್ದರು’

‘ಹಿಂದೊಮ್ಮೆ ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್‌ ಪೇಟ ಹಾಕಿಕೊಂಡು ನಾನೇ ಟಿಪ್ಪು ಎಂದು ಹೇಳಿಕೊಂಡಿದ್ದು ಮರೆತಿರಬೇಕು. ಈಗ ಟಿಪ್ಪುವನ್ನು ಮತಾಂಧ ಎನ್ನುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಉಪಚುನಾವಣೆಯಲ್ಲಿ ಮತ ಗಳಿಸಬೇಕು ಎಂಬ ಕಾರಣಕ್ಕೆ ಟಿಪ್ಪು ವಿಷಯವನ್ನು ಬಡಿದೆಬ್ಬಿಸಿದ್ದಾರೆ. ಹಿಂದೆ ಜಗದೀಶ ಶೆಟ್ಟರ್‌, ಸದಾನಂದಗೌಡ, ಡಿ.ಬಿ.ಚಂದ್ರೇಗೌಡ ಎಲ್ಲರೂ ಟಿಪ್ಪು ಪೇಟಾ ಹಾಕಿಕೊಂಡು ಟಿಪ್ಪು ಕುರಿತ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಚಿತ್ರಗಳನ್ನು ಪ್ರದರ್ಶಿಸಿದರು. ‘ಶೋಭಾ ಪೇಟಾ ಹಾಕಿದ್ದ ಚಿತ್ರ ಎಲ್ಲಿದೆಯಪ್ಪಾ’ ಎಂದು ಅವರು
ಹಾಸ್ಯ ಮಾಡಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.