ADVERTISEMENT

ಉಚ್ಚಾಟನೆ ನಿರ್ಣಯ ಸ್ವಾಗತಿಸುವೆ: ಶಾಸಕ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 27 ಮೇ 2025, 9:50 IST
Last Updated 27 ಮೇ 2025, 9:50 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ‘ಬಿಜೆಪಿ ಶಿಸ್ತು ಸಮಿತಿ ನನ್ನನ್ನು ಪಕ್ಷದಿಂದ 6 ವರ್ಷ ಉಚ್ಚಾಟಿಸಿದ ಕುರಿತು ವಾಟ್ಸ್‌ಆ್ಯಪ್ ಮತ್ತು ಇ–ಮೇಲ್ ಮೂಲಕ ಸಂದೇಶ ತಲುಪಿದೆ. ಸಮಿತಿಯ ನಿರ್ಣಯ ಸ್ವಾಗತಿಸುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

‘ಶಿಸ್ತು ಸಮಿತಿ ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದರೂ ಉಚ್ಚಾಟಿಸಲಾಗಿದೆ. ಒಂದೆಡೆ ಸಂದೇಹ, ಮತ್ತೊಂದೆಡೆ ಸಂತೋಷ ಆಗಿದೆ. ಪಕ್ಷ ಯಾವುದೇ ಕ್ರಮ ತೆಗೆದುಕೊಂಡರೂ, ಅದನ್ನು ಸ್ವಾಗತಿಸುವುದಾಗಿ ಆರಂಭದಲ್ಲೇ ಹೇಳಿದ್ದೆ’ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರೆಯದವರ ಜೊತೆಗೆ ಹೋಗುವುದರಲ್ಲಿ ಗೌರವ ಇಲ್ಲ. ಗೌರವ ಕಳೆದುಕೊಂಡ ಬಳಿಕ ಅವರ ಜೊತೆ ಹೋಗಬೇಕಾದ ಅನಿವಾರ್ಯತೆಯೂ ನನಗಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸಿದರೆ, ನಾನೂ ಅವರ ಬಣ್ಣ ಬಯಲು ಮಾಡುವೆ’ ಎಂದು ಅವರು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿದ್ದ ನನ್ನನ್ನು ಸರ್ಕಾರ ರಚಿಸಲು ಬಿಜೆಪಿಗೆ ಸೇರಿಸಿಕೊಂಡರು. ಪಕ್ಷದ ವಿರುದ್ಧ ಮಾತನಾಡದಿದ್ದರೂ ನನ್ನನ್ನು ದೂರ ಇಟ್ಟರು. ಸದ್ಯಕ್ಕೆ ಏನನ್ನೂ ಹೇಳಲಾರೆ. ಕಾದು ನೋಡಿ, ಸೂಕ್ತ ನಿರ್ಧಾರಕ್ಕೆ ಬರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.