ADVERTISEMENT

ಪ್ರತಿಕೂಲ ಹವಾಮಾನದಿಂದ ಇಳುವರಿ ಕುಸಿತ: ಮಾವಿನ ಮಿಡಿ ದುಬಾರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 0:08 IST
Last Updated 6 ಏಪ್ರಿಲ್ 2024, 0:08 IST
ಅಪ್ಪೆಮಿಡಿ ಗೊಂಚಲು
ಅಪ್ಪೆಮಿಡಿ ಗೊಂಚಲು   

ಉಡುಪಿ: ಉಪ್ಪಿನಕಾಯಿ ತಯಾರಿಕೆಗೆ ಹೆಚ್ಚಾಗಿ ಬಳಕೆಯಾಗುವ ಕಾಟು ಮಾವಿನ ಮಿಡಿ ಇಳುವರಿ ಕುಸಿತವಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ.

ಕಳೆದ ವರ್ಷ ಒಂದು ರೂಪಾಯಿಗೆ ಸಿಗುತ್ತಿದ್ದ ಕಾಟು ಮಿಡಿ ಈ ವರ್ಷ ₹3ಕ್ಕೆ ತಲುಪಿದ್ದು ಕೆ.ಜಿಗೆ ₹300 ಮುಟ್ಟಿದೆ. ದರ ಹೆಚ್ಚಾಗಿದ್ದರೂ ಬೇಡಿಕೆಯಷ್ಟು ಕಾಟು ಮಿಡಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎನ್ನುತ್ತಾರೆ ಗ್ರಾಹಕರು.

ಮಲೆನಾಡಿನ ಅಪ್ಪೆ ಮಿಡಿ ದರವಂತೂ ಕೈಗೆಟುಕದಷ್ಟು ಹೆಚ್ಚಾಗಿದೆ. ಒಂದು ಅಪ್ಪೆ ಮಿಡಿಗೆ ₹10 ದರ ಇದೆ ಎನ್ನುತ್ತಾರೆ ದಶಕಗಳಿಂದ ಮಿಡಿ ಮಾರಾಟದಲ್ಲಿ ತೊಡಗಿಸಿಕೊಂಡಿರುವ ರಾಜೇಂದ್ರ ಬೆಚ್ಚಳ್ಳಿ.

ADVERTISEMENT

ಕುಂದಾಪುರ ಭಾಗದಲ್ಲಿ ಮಿಡಿ ಮಾವಿನ ಉಪ್ಪಿನಕಾಯಿ ಹಾಗೂ ಕೆತ್ತೇ ( ತುಂಡು) ಉಪ್ಪಿನಕಾಯಿ ಬಳಕೆ ಹೆಚ್ಚಾಗಿದೆ. ದೀರ್ಘಾವಧಿ ಬಳಕೆಗೆ ಬರುವ ಮಿಡಿ ಉಪ್ಪಿನಕಾಯಿಗೆ‌ ಬೇಡಿಕೆ ಹೆಚ್ಚು. ಕಾಟು ಹಾಗೂ ಅಪ್ಪೆ ಎಂಬ ಎರಡು ತರದ ಮಿಡಿಗಳನ್ನು ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಕುಂದಾಪುರ, ಹೆಬ್ರಿ, ಬ್ರಹ್ಮಾವರ ಹಾಗೂ ಬೈಂದೂರು ತಾಲ್ಲೂಕುಗಳ ಹಾಗೂ ಮಲೆನಾಡಿಗೆ ಹೊಂದಿಕೊಂಡಿರುವ ಭಾಗಗಳಲ್ಲಿ ಹೆಚ್ಚು ಮಾವಿನ ಮರಗಳಿದ್ದು ಅಲ್ಲಿಂದಲೇ ಜಿಲ್ಲೆಯಾದ್ಯಂತ ಮಿಡಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತವೆ. ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ನಿಟ್ಟೂರು, ಸಂಪೇಕಟ್ಟೆ, ನಗರ, ಹೊಸನಗರ, ಸಾಗರ ಮುಂತಾದ ಪ್ರದೇಶಗಳಲ್ಲಿನ ಪರಿಮಳ ಭರಿತ ಅಪ್ಪೇ ಮಿಡಿಗಳು ಕರಾವಳಿಗೆ ಪೂರೈಕೆಯಾಗುತ್ತಿದ್ದು ಈ ಭಾಗದಲ್ಲಿ ಭಾರಿ ಬೇಡಿಕೆ ಇದೆ.

ಬೇಸಿಗೆ ತಿಂಗಳು ಆರಂಭವಾಗುತ್ತಿದ್ದಂತೆ ಕುಂದಾಪುರ ಹಾಗೂ ಉಡುಪಿಯ ವಾರದ ಸಂತೆಗಳಲ್ಲಿ ಅಪ್ಪೆ ಮಿಡಿಗಳು ಭಾರಿ ಪ್ರಮಾಣದಲ್ಲಿ ಕಂಡು ಬರುತ್ತಿದ್ದವು. ಆದರೆ, ಈ ವರ್ಷ ಮಾವಿನ ಮರದಲ್ಲಿ ಋತುಮಾನಕ್ಕೆ ಸರಿಯಾಗಿ ಹೂ ಬಿಡದ ಪರಿಣಾಮ ಹಾಗೂ ತಾಪಮಾನ ಏರಿಕೆಯಿಂದ ಇಳುವರಿ ತೀವ್ರ ಕುಸಿತವಾಗಿದೆ. ಪರಿಣಾಮ ಮಿಡಿ ದರವೂ ಏರಿಕೆಯಾಗಿದೆ.

ಮಿಡಿ ಹೂ ಅರಳುವ ಸಂದರ್ಭ ಮೋಡ ಕವಿದ ಪರಿಣಾಮ ಹೂಗಳು ಕರಟಿಹೋಗಿರುವುದು ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದಿರುವುದು ಕೂಡ ಮಿಡಿ ಇಳುವರಿ ಕುಸಿತಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.