ADVERTISEMENT

ಹುಬ್ಬಳ್ಳಿ: ಚುಮುಚುಮ ಚಳಿಯಲ್ಲೂ ಯೋಗ ಸಂಭ್ರಮ

ಯೋಗದ ಜೊತೆ ಬಾಬಾ ರಾಮದೇವ್‌ ನಗೆ ಚಟಾಕಿ, ಸಾವಿರಾರು ಶಿಬಿರಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 3:43 IST
Last Updated 30 ಜನವರಿ 2020, 3:43 IST
ಹುಬ್ಬಳ್ಳಿಯ ರೈಲ್ವೆ ಕ್ರೀಡಾಂಗಣದಲ್ಲಿ ಗುರುವಾರ ಯೋಗ ಗುರು ಬಾಬಾ ರಾಮದೇವ ಯೋಗಾಸನಗಳನ್ನು ಹೇಳಿಕೊಟ್ಟರು.
ಹುಬ್ಬಳ್ಳಿಯ ರೈಲ್ವೆ ಕ್ರೀಡಾಂಗಣದಲ್ಲಿ ಗುರುವಾರ ಯೋಗ ಗುರು ಬಾಬಾ ರಾಮದೇವ ಯೋಗಾಸನಗಳನ್ನು ಹೇಳಿಕೊಟ್ಟರು.    
""

ಹುಬ್ಬಳ್ಳಿ: ಸೂರ್ಯನ ಕಿರಣಗಳು ಭೂಮಿಗೆ ಬೀಳುವ ಮೊದಲೇ ಅಲ್ಲಿ ಸಾವಿರಾರು ಜನ ಸೇರಿದ್ದರು. ಯೋಗ ಮಾಡಲು ಸ್ಥಳ ನಿಗದಿ ಮಾಡಿಕೊಳ್ಳುವ ಕಾತರದಲ್ಲಿದ್ದರು. ಆರಂಭದಲ್ಲಿ ಚುಮು ಚಮು ಚಳಿಗೆ ನಡುಗಿದ್ದ ಶಿಬಿರಾರ್ಥಿಗಳು ಯೋಗ ಆರಂಭವಾದ ಕೆಲ ಹೊತ್ತಿನಲ್ಲಿಯೇ ಬೆವರು ಸುರಿಸಿದರು.

ನಗರದ ರೈಲ್ವೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಐದು ದಿನಗಳ ಯೋಗ ಶಿಬಿರದ ಮೊದಲ ದಿನವಾದ ಗುರುವಾರ ಕಂಡು ಬಂದ ಚಿತ್ರಣವಿದು. ಬೆಳಿಗ್ಗೆ ಐದು ಗಂಟೆಗೆ ಆರಂಭವಾದ ಯೋಗ ಎರಡೂವರೆ ತಾಸು ನಡೆಯಿತು.

ಪತಂಜಲಿ ಯೋಗ ಪೀಠದ ಸಂಸ್ಥಾಪಕ ಬಾಬಾ ರಾಮದೇವ್‌ ಆಸನಗಳನ್ನು ಹೇಳಿಕೊಡುವ ಜೊತೆಗೆ, ಜೀವನ ಪದ್ಧತಿ, ಆಹಾರ ನಿಯಮಗಳು ಹೇಗಿರಬೇಕು ಎನ್ನುವುದನ್ನು ತಿಳಿಸಿದರು. ಯೋಗದ ನಡುವೆ ನಗೆ ಚಟಾಕಿ ಹಾರಿಸಿ ಆಸನಗಳನ್ನು ಮಾಡಿ ಸುಸ್ತಾಗಿದ್ದ ಶಿಬಿರಾರ್ಥಿಗಳ ಮೊಗದಲ್ಲಿ ನಗು ತುಂಬಿದರು.

ADVERTISEMENT

ರಾಮದೇವ್‌ ಕಠಿಣ ಆಸನಗಳನ್ನು ಸರಾಗವಾಗಿ ಮಾಡಿದಾಗ, ಕೆಲ ಶಿಬಿರಾರ್ಥಿಗಳು ಕೂಡ ಆ ಆಸನಗಳನ್ನು ಮಾಡಲು ಪ್ರಯತ್ನಿಸಿದರು. ಆಗ ರಾಮದೇವ್‌ ‘ಮೊದಲ ದಿನವೇ ಎಲ್ಲವನ್ನೂ ಮಾಡಿದರೆ ನಾಳೆಯಿಂದ ಶಿಬಿರಕ್ಕೆ ನೀವು ಬರುವುದೇ ಇಲ್ಲ’ ಎಂದು ಚಟಾಗಿ ಹಾರಿಸಿ, ಪ್ರತಿದಿನವೂ ಒಂದೊಂದು ಆಸನಗಳನ್ನು ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.

ಮೂರು ಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಯೋಗ ಶಿಬಿರಕ್ಕೆ ಚಾಲನೆ ನೀಡಿ ‘ಜಾಗತಿಕ ಮಟ್ಟದಲ್ಲಿ ಯೋಗ ಪ್ರಸಿದ್ಧಿಯಾಗಲು ಬಾಬಾ ರಾಮದೇವ್‌ ಕಾರಣ. 12 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಶಿಬಿರ ನಡೆದಿತ್ತು’ ಎಂದು ನೆನಪಿಸಿಕೊಂಡರು.

‘ಯೋಗದಿಂದ ಮನಸ್ಸು ವಿಚಲಿತವಾಗುವುದಿಲ್ಲ. ಅಷ್ಠಾಂಗ ಯೋಗವನ್ನು ಪ್ರಚುರ ಪಡಿಸಿದ ಶ್ರೇಯಸ್ಸು ಪತಂಜಲಿಗೆ ಸಲ್ಲುತ್ತದೆ. ಇದ್ದೂರಿನಲ್ಲಿಯೇ ರಾಮದೇವ್‌ ಜೊತೆ ಯೋಗ ಮಾಡುವ ಅವಕಾಶ ಸಿಕ್ಕಿದ್ದು ನಮಗೆಲ್ಲರಿಗೂ ಹೆಮ್ಮೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುಬೇಕು’ ಎಂದರು.

ಇತ್ತೀಚಿಗ ಪದ್ಮ ಪ್ರಶಸ್ತಿಗೆ ಭಾಜನವಾಗಿರುವ ಉದ್ಯಮಿ ವಿಜಯ ಸಂಕೇಶ್ವರ ಅವರನ್ನು ರಾಮದೇವ್‌ ಸನ್ಮಾನಿಸಿದರು.

ಮೊದಲ ದಿನ ಸರಳ ಆಸನಗಳು: ಮೊದಲ ದಿನ ಸರಳ ಆಸನಗಳನ್ನು ಹೇಳಿಕೊಟ್ಟ ರಾಮದೇವ್ ‘ಯೋಗದಿಂದ ಸಕ್ಕರೆ ಕಾಯಿಲೆ, ಥೈರಾಯ್ಡ್‌ ತಡೆಗಟ್ಟಬಹುದು. ಸಕ್ಕರೆ ಕಾಯಿಲೆ ಬಂದವರು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗದ ಮೊರೆ ಹೋಗಬೇಕು. ಇದು ಮಧುಮೇಹಕ್ಕೆ ರಾಮಬಾಣ’ ಎಂದರು.

ಚಕ್ರಾಸನ ಮಾಡುತ್ತಲೇ ಅದರ ಮಹತ್ವ ಸಾರಿದರು. ಪ್ರತಿ ಆಸನ ಮಾಡಿದಾಗಲೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು. ರಾಮದೇವ್ ಕಠಿಣವಾದ ಗರುಡಾಸನ ಮಾಡಿದಾಗ ಶಿಬಿರಾರ್ಥಿಗಳು ಜೋರಾಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಿತ್ಯ ಯೋಗ ಮುಗಿಸಿದ ಬಳಿಕ ಉಪಾಹಾರ ಮಾಡುವ ಬದಲು ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಬೇಕು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಊಟ ಮಾಡಬೇಕು. ಚೆನ್ನಾಗಿ ಅಗೆದು ಊಟ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಊಟವಾದ ಒಂದು ಗಂಟೆಯ ನಂತರ ನೀರು ಕುಡಿಯಬೇಕು’ ಎಂದು ಸಲಹೆ ನೀಡಿದರು.

ಉದ್ಯಮಿ ಆನಂದ ಸಂಕೇಶ್ವರ, ಹೈಕೋರ್ಟ್‌ ನ್ಯಾಯಮೂರ್ತಿ ದಿನೇಶ ಕುಮಾರ, ಪತಂಜಲಿ ಯೋಗ ಸಮಿತಿ ರಾಜ್ಯದ ಉಸ್ತುವಾರಿ ಭವರಲಾಲ್‌ ಆರ್ಯ, ಎಸ್‌ವಿಎಸ್ ಪ್ರಸಾದ ಸೇರಿದಂತೆ ಹಲವು ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.