ADVERTISEMENT

ಸಲಹೆ ಕೇಳದ ಪ್ರಧಾನಿಯಿಂದಲೇ ದೇಶಕ್ಕೆ ಅಪಾಯ: ಯೋಗೇಂದ್ರ ಯಾದವ್ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 16:22 IST
Last Updated 3 ಜನವರಿ 2025, 16:22 IST
ಶುಕ್ರವಾರ ನಡೆದ ವಿಚಾರಸಂಕಿರಣದಲ್ಲಿ ಯೋಗೇಂದ್ರ ಯಾದವ್ ಮತ್ತು ಎಲ್.ಕೆ. ಅತೀಕ್  ಸಮಾಲೋಚನೆ
–ಪ್ರಜಾವಾಣಿ ಚಿತ್ರ
ಶುಕ್ರವಾರ ನಡೆದ ವಿಚಾರಸಂಕಿರಣದಲ್ಲಿ ಯೋಗೇಂದ್ರ ಯಾದವ್ ಮತ್ತು ಎಲ್.ಕೆ. ಅತೀಕ್  ಸಮಾಲೋಚನೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ, ಅವರಿಗೆ ಯಾರೋ ಸಲಹೆ ನೀಡಿ ಸರ್ಕಾರ ನಡೆಸುತ್ತಿದ್ದರು ಎಂಬ ಅಪವಾದ ಇತ್ತು. ಆದರೆ ಸಲಹೆ ಕೇಳದ ಪ್ರಧಾನಿಯೇ ದೇಶಕ್ಕೆ ಅಪಾಯಕಾರಿ’ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸ್ಮರಣಾರ್ಥ ಜಾಗೃತ ಕರ್ನಾಟಕವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅವರಿಗೆ ಸಲಹೆ ನೀಡುತ್ತಿದ್ದವರಾದರೂ ಯಾರು? ಪ್ರಧಾನಿಯಾಗಿ ಎಂದು ಜನರು ಆಯ್ಕೆ ಮಾಡಿದರೂ, ಆ ಹುದ್ದೆಯನ್ನು ನಿರಾಕರಿಸಿದವರು ಸಲಹೆ ನೀಡುತ್ತಿದ್ದರು.ಅದು ನಿಜವೇ ಆಗಿದ್ದರೆ, ಪ್ರಧಾನಿ ಒಬ್ಬರಿಗೆ ಅಹಮದಾಬಾದಿನ ಉದ್ಯಮಿಯೊಬ್ಬ ಮಾರ್ಗದರ್ಶನ ನೀಡುವಷ್ಟು ಅಪಾಯಕಾರಿಯಂತೂ ಅಲ್ಲ’ ಎಂದರು.

ADVERTISEMENT

‘ಸಲಹೆ ಅಥವಾ ಮಾರ್ಗದರ್ಶನ ಪಡೆದುಕೊಳ್ಳುವುದರಲ್ಲಿ ಯಾವ ತಪ್ಪಿದೆ? ತನಗೆಲ್ಲ ಗೊತ್ತಿದೆ ಎಂದು ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿಯಿಂದಲೇ ದೇಶಕ್ಕೆ ಅಪಾಯ. ಪ್ರಧಾನಿ ಸಲಹೆ ಪಡೆಯುವಂತವರಾಗಿದ್ದರೆ, ದೇಶದಲ್ಲಿ ನೋಟು ರದ್ದತಿಯಂತ ಯಾವುದೇ ಕ್ರಮ ಜಾರಿಯಾಗುತ್ತಿರಲಿಲ್ಲ’ ಎಂದರು.

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮನಮೋಹನ ಸಿಂಗ್‌ ಅವರ ಸರ್ಕಾರದ ವಿರುದ್ಧ ನಾನೂ ಮಾತನಾಡಿದ್ದೇನೆ. ಹಾಗೆಂದು ಅವರು ತಪ್ಪು ಮಾಡಿದ್ದರು ಎಂದರ್ಥವಲ್ಲ. ಅವರ ಆರ್ಥಿಕ ನೀತಿಗಳು ಯಾವೊಬ್ಬ ಉದ್ಯಮಿ ಅಥವಾ ವ್ಯಾಪಾರಿಯ ಪರವಾಗಿ ಇರಲಿಲ್ಲ. ಬದಲಿಗೆ ದೇಶದ ಕೋಟ್ಯಂತರ ಜನರ ಒಳಿತಿಗಾಗಿ ಕೆಲಸ ಮಾಡಿದ್ದರು’ ಎಂದರು.

ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ‘ನಮ್ಮದು ಸಮಾಜವಾದಿ ಆರ್ಥಿಕತೆ ಎಂದು ಹೇಳಿದರೂ ಎಲ್ಲ ಅಧಿಕಾರವು ಅಧಿಕಾರಿಗಳಲ್ಲಿ ಕೇಂದ್ರೀಕೃತವಾಗಿತ್ತು. ಮನಮೋಹನ ಸಿಂಗ್ ಅವರು ಉದಾರವಾದಿ ಆರ್ಥಿಕ ನೀತಿ ತರುವ ಮೂಲಕ ನಿಜವಾದ ಸಮಾಜವಾದದತ್ತ ದೇಶವನ್ನು ಕೊಂಡೊಯ್ದಿದ್ದರು. ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ, ಆರ್‌ಟಿಇ, ಆರ್‌ಟಿಐ ಮತ್ತು ನರೇಗಾದಂತಹ ನೀತಿಗಳನ್ನು ರೂಪಿಸಿ, ವಿಸ್ತೃತ ಕಲ್ಯಾಣ ರಾಜ್ಯದ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತಂದರು’ ಎಂದರು.

‘ಸಾಲಮನ್ನಾ ಆರ್ಥಿಕತೆಯ ಅನಿವಾರ್ಯ’

‘ಸಾಲಮನ್ನಾ ಮಾಡುವುದರಿಂದ ರೈತರು ಅದಕ್ಕೇ ಜೋತು ಬೀಳುತ್ತಾರೆ. ಹೀಗಾಗಿ ಸಾಲ ಮನ್ನಾ ಮಾಡಬಾರದು ಎಂಬುದು ಅಧಿಕಾರಿಗಳ ವಲಯದಲ್ಲಿ ಚಾಲ್ತಿಯಲ್ಲಿದ್ದ ಮಾತು. ಯುಪಿಎ–2 ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯದ ಅಡಿಯಲ್ಲಿ ಕೆಲಸ ಮಾಡುವಾಗ ನಾನೂ ಈ ಮಾತನ್ನು ನಂಬುತ್ತಿದ್ದೆ. ಆ ಅನಿಸಿಕೆಯನ್ನು ಬದಲಿಸಿದ್ದು ಮನಮೋಹನ ಸಿಂಗ್ ಅವರು’ ಎಂದು ಎಲ್‌.ಕೆ.ಅತೀಕ್‌ ಹೇಳಿದರು. ‘ಸಾಲಮನ್ನಾ ಕುರಿತ ಸಭೆಯಲ್ಲಿ ವಿರೋಧ ವ್ಯಕ್ತವಾದಾಗ ಮನಮೋಹನ ಸಿಂಗ್‌ ಅವರು ರೈತ ಕೃಷಿಗಾಗಿ ಮಾಡುವ ವೆಚ್ಚಕ್ಕಿಂತ ಆತನಿಗೆ ದೊರೆಯುವ ಮೊತ್ತ ತೀರಾ ಕಡಿಮೆ. ಕೃಷಿ ಕಾರ್ಮಿಕರು ತಯಾರಿಕಾ ವಲಯದತ್ತ ಹೋಗಬೇಕು ಎಂಬ ನೀತಿಯ ಕಾರಣದಿಂದಲೇ ರೈತ ನಷ್ಟ ಅನುಭವಿಸುತ್ತಾನೆ. ಹೀಗಾಗಿಯೇ ಆತ ಸಾಲಕ್ಕೆ ಸಿಲುಕುತ್ತಾನೆ. ಇದ ಆರ್ಥಿಕತೆಯ ಭಾಗವೇ ಆಗಿರುವ ಕಾರಣ ಸಾಲ ಮನ್ನಾ ಮಾಡುವುದೂ ಆರ್ಥಿಕತೆ ಅನಿವಾರ್ಯಗಳಲ್ಲಿ ಒಂದು ಎಂದು ಮನವರಿಕೆ ಮಾಡಿಕೊಟ್ಟರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.