ಬೆಂಗಳೂರು: ‘ಕನ್ನಡಿಗರನ್ನು ಕೆಣಕಿರುವ ನೀವೀಗ ಅವರ ಕ್ಷಮೆ ಕೇಳಲು ಯಾಕೆ ಹಿಂಜರಿಯುತ್ತಿದ್ದೀರಿ’ ಎಂದು ನಟ ಕಮಲ್ ಹಾಸನ್ ಅವರನ್ನು ಹೈಕೋರ್ಟ್ ಪ್ರಶ್ನಿಸಿದೆ.
‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂಬ ಕಮಲ್ ಹಾಸನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕಮಲ್ ಕ್ಷಮೆಯಾಚಿಸಬೇಕೆಂಬ ಒತ್ತಾಯವೂ ಬಲವಾಗಿತ್ತು. ಇದೇ 5ರಂದು ಬಿಡುಗಡೆಯಾಗಬೇಕಿರುವ ‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು.
ಈ ಮಧ್ಯೆ, ಹೈಕೋರ್ಟ್ ಮೊರೆ ಹೋದ ‘ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ನಾರಾಯಣನ್, ‘ಸಿನಿಮಾ ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.
ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕನ್ನಡ, ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು ನೀವೇನು ಇತಿಹಾಸಕಾರರೇ ಅಥವಾ ಭಾಷಾ ತಜ್ಞರೇ’ ಎಂದೂ ಪ್ರಶ್ನಿಸಿತು.
‘ಇವತ್ತಿನ ಪ್ರಸಂಗದಲ್ಲಿ ಕಮಲ್ ಹೇಳಿಕೆಯಿಂದ ಅಶಾಂತಿ, ಕ್ಷೋಭೆ ಉಂಟಾಗಿದೆ. ಇದಕ್ಕಾಗಿ ಕರ್ನಾಟಕದ ಜನರು ಕ್ಷಮೆ ಕೋರಲು ಕೇಳಿದ್ದಾರೆ ಅಷ್ಟೇ. ರಾದ್ಧಾಂತ ಎಬ್ಬಿಸಿದವರೇ ನೀವು. ಈಗ ಪೊಲೀಸ್ ರಕ್ಷಣೆ ಬೇಕು ಎಂದರೆ ಹೇಗೆ’ ಎಂದು ನ್ಯಾಯಪೀಠ ಕೇಳಿತು.
‘ಕೆಲವೊಮ್ಮೆ ಬಾಯಿ ತಪ್ಪಿ ಮಾತನಾಡುವ ಸಾಧ್ಯತೆ ಇರುತ್ತದೆ. ಒಮ್ಮೆ ಆಡಿದ ಮಾತನ್ನು ಹಿಂಪಡೆಯಲಾಗದು. ಬದಲಿಗೆ ಕ್ಷಮೆ ಕೋರಬಹುದು. ಕಮಲ್ ಕೂಡಾ ಕ್ಷಮೆ ಕೇಳಿದ್ದರೆ ಇಷ್ಟೆಲ್ಲಾ ರಗಳೆ ಬೆಳೆಯುತ್ತಲೇ ಇರಲಿಲ್ಲ’ ಎಂದು ಹೇಳಿತು.
ಬೆಳಗಿನ ಕಲಾಪದಲ್ಲಿ ಸಮಯಾವಕಾಶ ನೀಡಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಆದರೆ, ಮಧ್ಯಾಹ್ನ ವಿಚಾರಣೆಯಲ್ಲಿ ಸಂಸ್ಥೆಯ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಕಮಲ್ ಹಾಸನ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರವನ್ನು ತೆರೆದ ನ್ಯಾಯಾಲಯದಲ್ಲಿ ಓದಿದರು.
ಆದರೆ, ಈ ಪತ್ರದಲ್ಲಿ ‘ಕನ್ನಡಿಗರ ಕ್ಷಮೆ ಕೋರುತ್ತಿದ್ದೇನೆ’ ಎಂಬ ಪದ ಇಲ್ಲದಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ‘ಈ ಕೇಸನ್ನು ಮೆರಿಟ್ ಆಧಾರದಲ್ಲಿ ತೀರ್ಮಾನ ಮಾಡುತ್ತೇನೆ’ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಧ್ಯಾನ್ ಚಿನ್ನಪ್ಪ, ‘ಸಿನಿಮಾ ಬಿಡುಗಡೆಗೂ ಮುನ್ನವೇ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸದ್ಯಕ್ಕೆ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗುವುದಿಲ್ಲ’ ಎಂದು ಮೌಖಿಕವಾಗಿ ತಿಳಿಸಿದರು.
ಅಂತೆಯೇ, ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನುಪ್ರಕಾಶ್, ‘ಅರ್ಜಿದಾರರು ವಿಚಾರಣೆ ಮುಂದೂಡಲು ಕೋರುತ್ತಿರುವ ಕಾರಣ ಸರ್ಕಾರ ತನ್ನ ತೀರ್ಮಾನವನ್ನು ಕಾಯ್ದಿರಿಸಿದೆ’ ಎಂದರು. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಪರ ಹೈಕೋರ್ಟ್ ವಕೀಲ ಎಚ್.ಎಸ್.ಧನರಾಜ್ ವಾದ ಮಂಡಿಸಿದರು.
ನ್ಯಾಯಪೀಠ ಯಾವುದೇ ನಿರ್ದಿಷ್ಟ ಆದೇಶ ಹೊರಡಿಸದೆ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಡಿಜಿ–ಐಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಎಸ್) ಮುಖ್ಯ ಕಾರ್ಯ ನಿರ್ವಾಹಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ವಿಚಾರಣೆ ವೇಳೆ ನೆಲಜಲ ಭಾಷೆ ವಿಷಯವನ್ನು ಪ್ರಸ್ತಾಪಿಸಿದ ನ್ಯಾ.ಎಂ. ನಾಗಪ್ರಸನ್ನ ಅವರು ತಮ್ಮದೇ ಧಾಟಿಯಲ್ಲಿ ಹೇಳಿದ್ದು ಹೀಗೆ...
ಸಿನಿಮಾ ನಿರ್ಮಾಣಕ್ಕೆ ₹300 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಹೇಳುತ್ತಿದ್ದೀರಿ. ಹಾಗಾಗಿ ಕರ್ನಾಟಕದಲ್ಲಿ ಸಂಪಾದನೆ ಮಾಡಬೇಕೆಂದಾದರೆ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ನಿಮ್ಮ ಸಿನಿಮಾ ಬಿಡುಗಡೆ ಆಸೆಯನ್ನು ಬಿಟ್ಟುಬಿಡಿ.
ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿಯಲ್ಲ. ಸಾರ್ವಜನಿಕ ವ್ಯಕ್ತಿತ್ವ ಹೊಂದಿದವರು. ಇಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ವ್ಯಕ್ತಪಡಿಸುವ ಜನರನ್ನೇ ತನಿಖೆಗೆ ಒಳಪಡಿಸಲಾಗುತ್ತಿದೆ. ಹೀಗಿರುವಾಗ ಕಮಲ್‌ರಂತಹವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಛತ್ರಿಯಡಿ ಜನರ ಭಾವನೆಗಳನ್ನು ನೋಯಿಸುವುದು ಸಲ್ಲ. ನನ್ನ ಪ್ರಕಾರ ಜಲ ನೆಲ ಭಾಷೆ ಈ ಮೂರೂ ವಿಚಾರಗಳು ಯಾವುದೇ ವ್ಯಕ್ತಿಗಾಗಲೀ ಅತ್ಯಂತ ಮುಖ್ಯ. ಈ ದೇಶದಲ್ಲಿ ರಾಜ್ಯಗಳು ರಚನೆಯಾಗಿದ್ದೇ ಭಾಷೆಯ ಆಧಾರದಲ್ಲಿ.
ನೀವು ಕಮಲ್ ಹಾಸನ್ ಇರಬಹುದು ಅಥವಾ ಇನ್ಯಾರೋ ಆಗಿರಬಹುದು. ನೋಡಿ 1950ರಲ್ಲಿ ಅಂದಿನ ಗವರ್ನರ್ ಜನರಲ್ ರಾಜಗೋಪಾಲಚಾರಿ ಕೂಡಾ ಇಂಥದ್ದೇ ಹೇಳಿಕೆ ನೀಡಿ ನಂತರ ಬಹಿರಂಗ ಕ್ಷಮೆ ಕೋರಿದ್ದರು.
ಶೌರ್ಯದ ಮಹತ್ವ ಅಡಕವಾಗಿರುವುದು ವಿವೇಚನೆಯಲ್ಲಿ. ಯಾರ ಭಾವನೆಯನ್ನೂ ನಗಣ್ಯವಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ. ತಪ್ಪುಗಳಾಗುತ್ತವೆ ಆದಾಗ ಏನು ಮಾಡಬೇಕು ಎಂಬುದು ಗೊತ್ತಿರಬೇಕು.
ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ ಒಪ್ಪಿಕೊಂಡಿದ್ದೀರಿ. ಆದರೆ ಕ್ಷಮೆಯಾಚನೆ ಮಾಡಲು ಸಿದ್ದರಿಲ್ಲ. ನಿಮ್ಮ ಹೇಳಿಕೆಯಿಂದ ನಟ ಶಿವರಾಜಕುಮಾರ್ ಕೂಡಾ ಸಮಸ್ಯೆ ಅನುಭವಿಸುವಂತಾಗಿದೆ.
ಸಿನಿಮಾ, ನನಗೆ ಗೊತ್ತಿರುವ ಹಾಗೂ ನಾನು ಮಾತನಾಡುವ ಭಾಷೆ. ಸಿನಿಮಾ ಎನ್ನುವುದು ಒಂದು ಸಾರ್ವತ್ರಿಕ ಭಾಷೆ ಹಾಗೂ ಇದಕ್ಕೆ ಪ್ರೀತಿ ಹಾಗೂ ಬಾಂಧವ್ಯ ವೊಂದೇ ತಿಳಿದಿದೆ. ನನ್ನ ಮಾತುಗಳು ನಮ್ಮೊಳಗೆ ಆ ಬಾಂಧವ್ಯ, ಐಕ್ಯತೆ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕಾಗಿತ್ತು.–ಕಮಲ್ ಹಾಸನ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.