ADVERTISEMENT

ಯುವ ಸಂಸತ್‌: ಪ್ರತಿಮಾಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 15:58 IST
Last Updated 28 ಅಕ್ಟೋಬರ್ 2025, 15:58 IST
ಬೆಂಗಳೂರಿನಲ್ಲಿ ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಯುವ ಸಂಸರ್‌ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಅಣಕು ಕಲಾಪದಲ್ಲಿ ಭಾಗಿಯಾದರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಯುವ ಸಂಸರ್‌ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಅಣಕು ಕಲಾಪದಲ್ಲಿ ಭಾಗಿಯಾದರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ‘ಯುವ ಸಂಸತ್‌’ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರತಿಮಾ ಪ್ರಥಮ ಸ್ಥಾನ ಪಡೆದರು.

ಚಿಕ್ಕಮಗಳೂರು ಜಿಲ್ಲೆಯ ಇಷಾನಾ ದ್ವಿತೀಯ, ಹಾಸನದ ಶಾನಿಯಾ ತೃತೀಯ ಹಾಗೂ ರಾಮನಗರದ ರವಿಕುಮಾರ್‌  ನಾಲ್ಕನೇ ಬಹುಮಾನಕ್ಕೆ ಭಾಜನರಾದರು. ಒಟ್ಟು 10 ಬಹುಮಾನಗಳನ್ನು ವಿತರಿಸಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳ 64 ಪಿಯು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಪ್ರಧಾನ ಮಂತ್ರಿ, ಲೋಕಸಭಾಧ್ಯಕ್ಷ, ಆಡಳಿತ–ವಿರೋಧ ಪಕ್ಷದ ಸದಸ್ಯರ ಪಾತ್ರಗಳನ್ನು ಸದನದ ನಿಯಾವಳಿಗಳಂತೆಯೇ ಯಥಾವತ್ತಾಗಿ ನಿಭಾಯಿಸಿದರು. ವಿರೋಧ ಪಕ್ಷಗಳ ಸದಸ್ಯರಂತೂ ಪ್ರಶ್ನೆ, ಉಪ ಪ್ರಶ್ನೆಗಳ ಮೂಲಕ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ‘ಒಂದು ರಾಷ್ಟ್ರ ಒಂದು ಚುನಾವಣೆ’, ‘ದೇಶದ ಹಣಕಾಸಿನ ಅಸಮರ್ಪಕ ಹಂಚಿಕೆ’, ‘ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಕೃತ್ಯ’, ಹೀಗೆ ಹತ್ತು ಹಲವು ಗಂಭೀರ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಗಮನ ಸೆಳೆದರು.

ADVERTISEMENT

ಕೆಲವು ಸಮಯ ನೈಜ ಕಲಾಪದಲ್ಲಿ ನಡೆಯುವ ಗದ್ದಲದ ವಾತಾವರಣ ಇಲ್ಲಿಯೂ ಸೃಷ್ಟಿಯಾಗಿತ್ತು. ಹಲವಾರು ಬಾರಿ ಶಾಂತಿ ಕಾಪಾಡುವಂತೆ ಸಭಾಧ್ಯಕ್ಷರು ಹೇಳಿದರೂ, ಸದಸ್ಯರು ಕೇಳದೇ ಇದ್ದಾಗ, ತೀರ್ಪುಗಾರರು ಮಧ್ಯ ಪ್ರವೇಶಿಸಿ ನಿಯಮಗಳನ್ನು ಸ್ಪಷ್ಟಪಡಿಸಿದರು. ತಮ್ಮ ಮಕ್ಕಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಿಲ್ಲ ಎಂದು ಸ್ಪರ್ಧೆ ನೋಡಲು ಬಂದಿದ್ದ ಕೆಲ ಪೋಷಕರು ಮಧ್ಯ ಪ್ರವೇಶಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆನಂತರ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಿದರು.

ಚುನಾವಣೆಗಳ ಸೋಲು ಒಳ್ಳೆಯ ಪಾಠ ಕಲಿಸುತ್ತದೆ. ಯುವಕರು ರಾಜಕೀಯಕ್ಕೆ ಬರಬೇಕು. ಯುವ ಸಂಸತ್‌ನಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗುತ್ತವೆ
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.