ADVERTISEMENT

ರಾಜ್ಯದಲ್ಲಿ ಜೀಕಾ ವೈರಸ್ ಪತ್ತೆ

ಬಾಲಕಿಯಲ್ಲಿ ದೃಢ: ಮೊದಲ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 20:03 IST
Last Updated 12 ಡಿಸೆಂಬರ್ 2022, 20:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು/ಮಾನ್ವಿ:ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ 5 ವರ್ಷದ ಬಾಲಕಿಯಲ್ಲಿ ಜೀಕಾ ವೈರಸ್ ದೃಢಪಟ್ಟಿದೆ. ರಾಜ್ಯದಲ್ಲೇ ಇದು ಮೊದಲ ಪ್ರಕರಣವಾಗಿದೆ.

ಆರೋಗ್ಯ ಇಲಾಖೆಯ ತಜ್ಞರು, ಅಧಿಕಾರಿಗಳು ಸೋಮವಾರ ತಾಲ್ಲೂಕಿನ ನೀರಮಾನ್ವಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕೆಲ ದಿನಗಳ ಹಿಂದೆ ಅನಾರೋಗ್ಯ ಪೀಡಿತ ಬಾಲಕಿಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಡಿ.5ರಂದು ರೋಗಲಕ್ಷಣ ಹೊಂದಿದ್ದ ಮೂವರ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಡಿ. 8ರಂದು ವರದಿ ಬಂದಿದ್ದು, ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸೋಂಕಿತ ಬಾಲಕಿ ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಇದು ಸಹ ಸೊಳ್ಳೆಯಿಂದ ಹರಡುವ ರೋಗವಾಗಿದೆ. ಡೆಂಗಿ ಮತ್ತು ಚಿಕೂನ್‌ಗುನ್ಯಾ ಮಾದರಿಗಳ ಪರೀಕ್ಷೆ ನಡೆಸಿದಾಗ ಈ ಪ್ರಕರಣ ದೃಢಪಟ್ಟಿದೆ ಎಂದು ತಿಳಿಸಿದರು.

ಜನರು ಆತಂಕ ಪಡುವ ಅಗತ್ಯವಿಲ್ಲ.ರಾಜ್ಯದಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿರಂತರ ನಿಗಾವಹಿಸಲಾಗಿದೆ. ವೈರಸ್‌ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆಯಿಂದ ಶೀಘ್ರ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.